ವಿದೇಶ

ಸಿಂಗಾಪುರದಲ್ಲಿ ವಿಶ್ವದ ಮೊದಲ ಚಾಲಕರಹಿತ ಟ್ಯಾಕ್ಸಿ ಸೇವೆ ಆರಂಭ

Srinivasamurthy VN

ಸಿಂಗಾಪುರ: ಚಾಲಕ ರಹಿತ ಕಾರಿನ ಆವಿಷ್ಕರಣೆ ಮಾಡಿದ್ದ ಗೂಗಲ್ ಪರಿಕಲ್ಪನೆಯ ಆಧಾರದ ಮೇಲೆಯೇ ಸಿಂಗಾಪುರದಲ್ಲಿ ವಿನೂತನ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ.

ಗೂಗಲ್, ಆ್ಯಪಲ್ ಸೇರಿದಂತೆ ಇತರೆ ಖ್ಯಾತ ತಂತ್ರಜ್ಞಾನ ಸಂಸ್ಥೆಗಳು ಈ ಬಗ್ಗೆ ಪರಿಶೋಧನೆ ಮುಂದುವರೆಸಿರುವಂತೆಯೇ ಸಿಂಗಾಪುರದಲ್ಲಿ ಸ್ಟಾರ್ಟಪ್ ಸಂಸ್ಥೆಯೊಂದು ಇನ್ನೂ ಒಂದು ಹೆಜ್ಜೆ  ಮುಂದೆ ಹೋಗಿ ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನೇ ಆರಂಭಿಸಿವೆ. ಗುರುವಾರ ಸಿಂಗಾಪುರದಲ್ಲಿ ಚಾಲಕ ರಹಿತ ಕಾರು ಸೇವೆಗೆ ಚಾಲನೆ ನೀಡಲಾಗಿದ್ದು, ವ್ಯಾಪಕ ಬೆಂಬಲ  ವ್ಯಕ್ತವಾಗುತ್ತಿದೆ.

ಸಿಂಗಾಪುರದಲ್ಲಿ ಇತ್ತೀಚೆಗೆ ಉದಯವಾದ ಸ್ಟಾರ್ಟಪ್ ಸಂಸ್ಥೆ ನುಟುನೋಮಿ ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ನುಟನೋಮಿ ಮೂಲತಃ ಅಮೆರಿಕದ  ಎಂಐಟಿಯ ಪದವೀಧರರಾದ ಲ್ಯಾಗ್ನೆಮ್ಮಾ ಮತ್ತು ಎಮಿಲಿಯೋ ಎಂಬ ತಂತ್ರಜ್ಞರು 2013ರಲ್ಲಿ ಹುಟ್ಟುಹಾಕಿದ್ದ ಸಂಸ್ಥೆಯಾಗಿದೆ. ಈ ಸಂಸ್ಥೆ ಕಾರುಗಳನ್ನು ನಿರ್ಮಿಸುವುದಿಲ್ಲವಾದರೂ ಸಾಮಾನ್ಯ  ಕಾರುಗಳಿಗೆ ಸೆನ್ಸರ್ ಮತ್ತು ಕ್ಯಾಮೆರಾ ಅಳವಡಿಸಿ, ಅದು ಸ್ವಯಂಚಾಲಿತವಾಗಿ ಚಲಿಸುವಂಥ ಸಾಫ್ಟ್ ವೇರ್‌ ಅಭಿವೃದ್ಧಿ ಪಡಿಸಿ ಕಾರಿಗೆ ಅಳವಡಿಸಿದೆ. ಈ ವಿನೂತನ ಪರಿಕಲ್ಪನೆಯ ಟ್ಯಾಕ್ಸಿ  ಸೇವೆಗೆ ಕಳೆದ ತಿಂಗಳಷ್ಟೇ ಸಿಂಗಾಪುರ ಸರ್ಕಾರ ಅನುಮತಿ ನೀಡಿತ್ತು. ಇದೀಗ ಗುರುವಾರದಿಂದ ಸಂಸ್ಥೆ ಇದನ್ನು ಕಾರ್ಯರೂಪಕ್ಕೆ ತಂದಿದೆ.

ಆಗಸ್ಟ್‌ ಮಾಸಾಂತ್ಯಕ್ಕೆ ಪಿಟ್ಸ್‌ಬರ್ಗ್‌ನಲ್ಲಿ ಚಾಲಕ ರಹಿತ ಕಾರಿನ ಸೇವೆ ಆರಂಭಿಸುವುದಾಗಿ ಅಮೆರಿಕ ಮೂಲದ ಆ್ಯಪ್‌ ಆಧರಿತ ಟ್ಯಾಕ್ಸಿ ಸೇವಾ ಕಂಪನಿಯಾದ ಉಬರ್‌ ಘೋಷಿಸಿತ್ತು. ಆದರೆ  ಉಬರ್‌ಗೆ ಸೆಡ್ಡು ಹೊಡೆದಿರುವ ನುಟುನೋಮಿ ಗುರುವಾರವೇ ಯಶಸ್ವಿಯಾಗಿ ಸೇವೆ ನೀಡುವ ಹೊಸ ಹೆಜ್ಜೆ ಇಟ್ಟಿದೆ. ಆರಂಭಿಕ ಹಂತದಲ್ಲಿ ಸಿಂಗಾಪುರದಲ್ಲಿ ಆರು ಕಾರುಗಳನ್ನು  ಪ್ರಾಯೋಗಿಕವಾಗಿ ಬಿಡಲಾಗಿದ್ದು, ನಗರದ 6.5 ಚದರ ಮೈಲು ಸುತ್ತಳತೆಯ ಪ್ರದೇಶಕ್ಕೆ ಮಾತ್ರ ಈ ಸೇವೆ ಸೀಮಿತವಾಗಿದೆ.

ಇನ್ನು ಚಾಲಕರಹಿತ ಕಾರು ಸೇವೆ ಪಡೆಯಬಯಸುವ ಗ್ರಾಹಕರು ಹೆಸರು ನೊಂದಾಯಿಸಿಕೊಳ್ಳುವ ಅವಶ್ಯಕತೆ ಇದ್ದು, ಮೊದಲು ಹೆಸರು ನೊಂದಾಯಿಸಿಕೊಂಡ ಗ್ರಾಹಕರಿಗೆ ಕಂಪನಿ ಸದ್ಯಕ್ಕೆ  ಉಚಿತವಾಗಿ ಟ್ಯಾಕ್ಸಿ ಸೇವೆ ನೀಡುತ್ತಿದೆ ಎಂದು ತಿಳಿದುಬಂದಿದೆ. ಈ ಸೇವೆಗಾಗಿ ಸಂಸ್ಥೆ ಜಪಾನ್ ನ ಮಿತ್ಸುಬಿಷಿ ಹಾಗೂ ಫ್ರಾನ್ಸ್ ಮೂಲದ ರೆನಾಲ್ಟ್ ಸಂಸ್ಥೆಗಳ 6 ಸಣ್ಣ ಕಾರುಗಳನ್ನು  ಬಳಸಿಕೊಳ್ಳುತ್ತಿದೆ. ಈ ಸಂಖ್ಯೆಯನ್ನು ವರ್ಷಾಂತ್ಯಕ್ಕೆ 12ಕ್ಕೇರಿಸಿ ಬಳಿಕ ಬೇಡಿಕೆಗೆ ಅನುಗುಣವಾಗಿ 2018ರ ಹೊತ್ತಿಗೆ ಈ ಸಂಖ್ಯೆಯನ್ನು ವಿಸ್ತರಿಸಲಾಗುತ್ತದೆ ಎಂದು ನುಟನೋಮಿ ಸಂಸ್ಥೆ ಹೇಳಿದೆ.

SCROLL FOR NEXT