ಇಸ್ಲಾಮಾಬಾದ್: ಬೇಹುಗಾರಿಕೆ ನಡೆಸುತ್ತಿದ್ದರೆಂದು ಬಂಧನಕ್ಕೊಳಪಗಾಗಿದ್ದ ಕುಲ್'ಭೂಷಣ್ ಯಾದವ್ ಅವರ ವಿರುದ್ಧ ನಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕಿಸ್ತಾನ ಬುಧವಾರ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಪಾಕಿಸ್ತಾನದ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಕುಲ್'ಭೂಷಣ್ ಯಾವದ್ ಅವರು ಭಾರತದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದರ ಬಗ್ಗೆ ಪಾಕಿಸ್ತಾನ ಬಳಿ ಯಾವುದೇ ರೀತಿಯ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಅವರು ಹೇಳಿದ್ದಾರೆಂದು ಹೇಳಿಕೊಂಡಿದೆ.
ಕುಲ್'ಭೂಷಣ್ ಯಾದವ್ ಪ್ರಸ್ತುತ ಸೂಕ್ತರೀತಿಯಲ್ಲಿ ಹಾಗೂ ನಿಖರವಾದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಹೇಳಿದ್ದಾರೆಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಕೆಲ ದಿನಗಳ ಹಿಂದಷ್ಟೇ ಬಲೂಚಿಸ್ತಾನದಲ್ಲಿ ನಡೆದ ಪ್ರತಿಭಟನೆ ವೇಳೆ ಕುಲ್'ಭೂಷಣ್ ಯಾದವ್ ಅವರನ್ನು ಪಾಕಿಸ್ತಾನ ಸೇನೆ ಬಂಧನಕ್ಕೊಳಪಡಿಸಿತ್ತು.
ಪಾಕಿಸ್ತಾನದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಲು ಭಾರತ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ್ದ ಪಾಕಿಸ್ತಾನ ಕುಲ್'ಭೂಷಣ್ ಯಾದವ್ ಅವರನ್ನು ಬಂಧನಕ್ಕೊಳಪಡಿಸಿತ್ತು. ಬಂಧನಕ್ಕೊಳಗಾಗಿರುವ ಕುಲ್ ಭೂಷಣ್ ಯಾದವ್ ಅವರು ಬಲೂಚಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ. ಅಲ್ಲದೆ, ಭಾರತದ 'ರಾ'ಸಂಸ್ಥೆಗೆ ಮಾಹಿತಿ ರವಾನಿಸುತ್ತಿದ್ದ ಎಂದು ಪಾಕಿಸ್ತಾನ ಆರೋಪಿಸಿತ್ತು. ಅಲ್ಲದೆ, ಕುಲ್ ಭೂಷಣ್ ಸಿಂಗ್ ಅವರು ಗೂಡಾಚಾರ್ಯೆ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆಂದು ಹೇಳಿ ವಿಡಿಯೋವನ್ನು ಬಿಡುಗಡೆ ಮಾಡಿತ್ತು.
ಈ ಆರೋಪವನ್ನು ಭಾರತ ತಳ್ಳಿಹಾಕಿತ್ತು. ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮರೆಮಾಚುವ ಸಲುವಾಗಿ ಪಾಕಿಸ್ತಾನ ಇಂತಹ ಕಥೆಗಳನ್ನು ಕಟ್ಟುತ್ತಿದೆ ಎಂದು ಭಾರತ ತಿರುಗೇಟು ನೀಡಿತ್ತು. ಪಾಕಿಸ್ತಾನದ ಆರೋಪ ಆಧಾರ ರಹಿತವಾದದ್ದು ಎಂದು ಹೇಳಿತ್ತು.
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತೀಯ ಗುಪ್ತಚರ ಇಲಾಖೆಗಳ ಕೈವಾಡವಿದೆ ಎಂಬುದು ಪಾಕಿಸ್ತಾನ ಹಲವು ದಿನಗಳಿಂದಲೂ ಆರೋಪ ಮಾಡುತ್ತಲೇ ಬಂದಿದ್ದು, ಈ ವಿಷಯವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಲು ಪಾಕಿಸ್ತಾನ ಸತತ ಯತ್ನವನ್ನು ನಡೆಸುತ್ತಲೇ ಇದೆ, ಆದರೆ, ಪಾಕಿಸ್ತಾನಕ್ಕೆ ಸ್ಪಷ್ಟ ಸಾಕ್ಷ್ಯಾಧಾರಗಳು ದೊರಯದ ಹಿನ್ನೆಲೆಯಲ್ಲಿ ಭಾರತ ವಿರುದ್ಧ ಸಾಕಷ್ಟು ಪಿತೂರಿಗಳನ್ನು ನಡೆಸುತ್ತಿದೆ.