ವಿದೇಶ

ದಕ್ಷಿಣ ಕೊರಿಯಾ: ಅಧ್ಯಕ್ಷೆ ಪಾರ್ಕ್ ಜಿಯನ್-ಹೈಯನ್ನು ಪದಚ್ಯುತಿಗೊಳಿಸಲು ಸಂಸದರ ಒತ್ತಾಯ

Sumana Upadhyaya
ಸಿಯೊಲ್: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷೆ ಪಾರ್ಕ್ ಜಿಯನ್ ಹೈ ವಿರುದ್ಧ ಭ್ರಷ್ಟಾಚಾರ ಹಗರಣ ಆರೋಪ ಕೇಳಿಬಂದ ನಂತರ ಇದೀಗ ಆಶ್ಚರ್ಯಕರ ಮತ್ತು ಆಘಾತ ರೀತಿಯಲ್ಲಿ ಅವರ ಮೇಲೆ ಸಂದೇಹ ವ್ಯಕ್ತಪಡಿಸಿ ಸ್ಥಾನದಿಂದ ಪದಚ್ಯುತಿಗೊಳಿಸಬೇಕೆಂದು ಅಲ್ಲಿನ ಸಂಸದರು ಮತ ಹಾಕಿದ್ದಾರೆ. ಇದರಿಂದ ಅಧ್ಯಕ್ಷೆ ಪಾರ್ಕ್ ಜಿಯನ್ ಒಂಟಿಯಾಗಿದ್ದಾರೆ. ಸಂಸದರು ಅವರ ವಿರುದ್ಧ ಮತ ಹಾಕಿದ ನಂತರ ನ್ಯಾಷನಲ್ ಅಸೆಂಬ್ಲಿ ಕಟ್ಟಡದ ಎದುರು ಸಾವಿರಾರು ಪ್ರತಿಭಟನಾಕಾರರು ನೆರೆದಿದ್ದರು. ಅಧ್ಯಕ್ಷೆ ವಿರುದ್ಧ ಗಂಭೀರ ಆಪಾದನೆಗಳು ಕೇಳಿಬರುತ್ತಿವೆ.
ಇಂದು ಬೆಳಗ್ಗೆ ಸಂಸದರು ಸಂಸತ್ತಿಗೆ ಆಗಮಿಸುತ್ತಿದ್ದಂತೆ ನೂರಾರು ಮಂದಿ ಪ್ರತಿಭಟನಾಕಾರರು ರಾಷ್ಟ್ರೀಯ ಅಸೆಂಬ್ಲಿಯ ಮುಖ್ಯ ಗೇಟ್ ಮುಂದೆ ರ್ಯಾಲಿ ನಡೆಸಿ ಅಧ್ಯಕ್ಷೆಯನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಒತ್ತಾಯಿಸಿದರು. ಬೇರೆ ನಗರಗಳಿಂದಲೂ ಪ್ರತಿಭಟನಾಕಾರರು ಆಗಮಿಸಿದ್ದರು. ಇನ್ನು ಕೆಲವರು ನಿನ್ನೆ ರಾತ್ರಿಯಿಂದ ರಸ್ತೆ ಮುಂದೆ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಅಧ್ಯಕ್ಷೆಯಾಗುವ ಸಾಮರ್ಥ್ಯ ಪಡೆದ ಪಾರ್ಕ್ ಅವರಿಗೆ 'ಚುನಾವಣೆಯ ರಾಣಿ' ಎಂದು ಕರೆದಿದ್ದ ದಕ್ಷಿಣ ಕೊರಿಯಾ ಜನತೆ ಇದೀಗ ಆಕೆಯನ್ನು ದೂಷಿಸುತ್ತಿದ್ದಾರೆ. ಹಲವು ಕಂಪೆನಿಗಳಿಂದ ಹಣವನ್ನು ಬಲಾತ್ಕಾರವಾಗಿ ಸುಲಿಗೆ ಮಾಡಿದ ಆರೋಪ ಅವರ ಮೇಲಿದೆ. 
ದಕ್ಷಿಣ ಕೊರಿಯಾದಲ್ಲಿ 1980ರ ಕೊನೆಯ ವೇಳೆಗೆ ಪ್ರಜಾಪ್ರಭುತ್ವ ಜಾರಿಗೆ ಬಂದಂದಿನಿಂದ ಅವರ ಪರವಾಗಿ ಅತ್ಯಂತ ಕಡಿಮೆ ಶೇಕಡಾ 4ರಷ್ಟು ಮತ ಬಿದ್ದಿದೆ. ಒಂದು ಕಾಲದಲ್ಲಿ ಪಾರ್ಕ್ ಅವರಿಗೆ ಮಾರ್ಗದರ್ಶಕರಾಗಿ ರಾಜಕೀಯ ಜೀವನದಲ್ಲಿ ಮೇಲೆ ತಂದಿದ್ದ ಹಿರಿಯ ಸಂಪ್ರದಾಯವಾದಿಗಳು ಇದೀಗ ಆಕೆಯಿಂದ ದೂರವುಳಿಯಲು ಪ್ರಯತ್ನಿಸುತ್ತಿದ್ದಾರೆ. ನಿನ್ನೆ ಬಿಡುಗಡೆಗೊಂಡ ಒಂದು ಅಭಪ್ರಾಯ ಸಮೀಕ್ಷೆ ಪ್ರಕಾರ, ಶೇಕಡಾ 78 ಮಂದಿ ಪಾರ್ಕ್ ಜಿಯನ್ ಹೈ ಅವರನ್ನು ಪದಚ್ಯುತಿಗೊಳಿಸುವಂತೆ ಮತ ಹಾಕಿದ್ದಾರೆ.
SCROLL FOR NEXT