ವ್ಲಾಡಿಮಿರ್ ಪುಟಿನ್-ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರಿಯಾದ ಅಂಶಗಳ ಬಗ್ಗೆ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಟ್ರಂಪ್ ಗೆಲುವಿಗೆ ಅಮೆರಿಕಾದ ಶತ್ರು ರಷ್ಯಾ ಸಹಕರಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಬಹಿರಂಗಪಡಿಸಿದೆ.
2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಕಾರಣವಾ ರಷ್ಯಾದ ಸಹಕಾರ ಎಂದಿರುವ ಸಿಐಎ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ವರ್ಚಸ್ಸನ್ನು ಕುಗ್ಗಿಸುವ ಮೂಲಕ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಕರಿಸಿತ್ತು ಎಂದು ಹೇಳಿದೆ.
ಅಮೆರಿಕಾ ಅಧಿಕಾರಿಗಳು ವಿಕಿಲಿಕ್ಸ್ ಗೆ ನೀಡಿರುವ ವಿವರಣೆಗಳ ಬಗ್ಗೆ ವರದಿಯೊಂದು ಪ್ರಕಟ ವಾಗಿದ್ದು. ವರದಿಯ ಪ್ರಕಾರ ಅಮೆರಿಕಾದ ಗುಪ್ತಚರ ಇಲಾಖೆ ರಷ್ಯಾ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದ ಕೆಲವೊಂದು ವ್ಯಕ್ತಿಗಳನ್ನು ಗುರುತಿಸಿದ್ದು, ಇದೇ ವ್ಯಕ್ತಿಗಳು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ಆಕೆಯ ಚುನಾವಣಾ ಪ್ರಚಾರದ ಸಾರಥ್ಯ ವಹಿಸಿದ್ದ ಪ್ರಚಾರ ಅಧ್ಯಕ್ಷರು ಸೇರಿದಂತೆ ಹಲವು ನಾಯಕರ ಇ-ಮೇಲ್ ಗಳನ್ನು ಹ್ಯಾಕ್ ಮಾಡಿ ವರ್ಚಸ್ಸನ್ನು ಕುಗ್ಗಿಸುವ ಕೆಲಸ ಮಾಡಿದ್ದರು ಎಂದು ತಿಳಿದುಬಂದಿದೆ.
ಗುಪ್ತಚರ ಇಲಾಖೆಗೆ ಅರಿವಿರುವ ರಷ್ಯಾದ ವ್ಯಕ್ತಿಗಳು ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಕಾರಿಯಾಗುವ ರಷ್ಯಾದ ತಂತ್ರದ ಭಾಗವಾಗಿದ್ದರು. ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಗೆಲ್ಲಬೇಕೆಂಬುದು ರಷ್ಯಾದ ಉದ್ದೇಶವಾಗಿತ್ತು ಎಂದು ಸಿಐಎ ಅಧಿಕಾರಿಯೊಬ್ಬರು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕರಿಸಬೇಕೆಂಬುದು ರಷ್ಯಾದ ಒಮ್ಮತದ ಅಭಿಪ್ರಾಯವಾಗಿತ್ತು. ಕಳೆದ ವಾರ ಅಮೆರಿಕಾದ ಪ್ರಮುಖ ಸೆನೆಟರ್ ಗಳಿಗೆ ಸಿಐಎ ಗುಪ್ತಚರ ಮಾಹಿತಿ ಕುರಿತು ಚಿತ್ರಣ ನೀಡುವ ವೇಳೆಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ವೇಳೆ ರಷ್ಯಾ ಡೆಮಾಕ್ರೆಟಿಕ್ ಪಕ್ಷದ ವಿರುದ್ಧ ಸೈಬರ್ ಅಭಿಯಾನ ಕೈಗೊಂಡಿತ್ತು ಎಂದು ಅಕ್ಟೋಬರ್ ನಲ್ಲಿ ಅಮೆರಿಕಾ ಸರ್ಕಾರವೇ ನೇರ ಆರೋಪ ಹೊರಿಸಿತ್ತು. ಅಷ್ಟೇ ಅಲ್ಲದೇ ಅಧ್ಯಕ್ಷೀಯ ಚುನಾವಣೆ ವೇಳೆ ಸೈಬರ್ ಅಭಿಯಾನ ಕೈಗೊಂಡಿದ್ದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಎಚ್ಚರಿಕೆ ನೀಡಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪವನ್ನು ರಷ್ಯಾದ ಅಧಿಕಾರಿಗಳು ನಿರಾಕರಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ ತನ್ನ ಉದ್ದೇಶ ಈಡೇರಿಸಿಕೊಳ್ಳಲು ಹಿಲರಿ ಕ್ಲಿಂಟನ್ ಇ-ಮೇಲ್ ಹ್ಯಾಕ್ ಮಾಡುವುದು ಸೇರಿದಂತೆ ಅಭ್ಯರ್ಥಿ ವಿರುದ್ಧ ಸೈಬರ್ ಅಭಿಯಾನ ಕೈಗೊಂಡ ವಿಷಯದ ಬಗ್ಗೆ ಟ್ರಂಪ್ ಅಧಿಕಾರ ಪರಿವರ್ತನಾ ತಂಡ ಪ್ರತಿಕ್ರಿಯೆ ನೀಡಿದೆ, ಆದರೆ ರಷ್ಯಾದ ಹಸ್ತಕ್ಷೇಪದ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡದೇ, ಟ್ರಂಪ್ ಗೆಲುವಿನ ಹಿಂದೆ ರಷ್ಯಾ ಸಹಕಾರ ಇದೆ ಎಂಬ ಅಂಶವನ್ನು ಮಾತ್ರ ನಿರಾಕರಿಸಿದೆ.
ಅಧ್ಯಕ್ಷೀಯ ಚುನಾವಣೆ ನಡೆಯುವುದಕ್ಕೂ ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರೆ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.