ಅಮೆರಿಕಾದ ನೂತನ ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್
ನ್ಯೂಯಾರ್ಕ್: ರಾಜಕಾರಣಿಗಳು ಮತ್ತು ವಿದೇಶಾಂಗ ನೀತಿ ಪಂಡಿತರನ್ನು ಕಡೆಗಣಿಸಿ, ರಾಜ್ಯ ಕಾರ್ಯದರ್ಶಿ ಹುದ್ದೆಗೆ ಎಕ್ಸಾನ್ ಮೊಬಿಲ್ ಸಂಸ್ಥೆಯ ಸಿಇಒ ರೆಕ್ಸ್ ಟಿಲ್ಲರ್ಸನ್ ಅವರನ್ನು ನೇಮಿಸಿ ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಈ ನೇಮಕಾತಿಯನ್ನು ಘೋಷಿಸರುವ ಟ್ರಂಪ್ "ಅವರ ವ್ಯವಧಾನ, ವಿಶಾಲ ಅನುಭವ ಮತ್ತು ವಿವಿಧ ಭೂಪ್ರದೇಶಗಳ ರಾಜಕೀಯದ ಆಳದ ಅರಿವು, ರಾಜ್ಯ ಕಾರ್ಯದರ್ಶಿ ಹುದ್ದೆಗೆ ಅವರು ಅತ್ಯದ್ಭುತ ಆಯ್ಕೆಯಾಗಿದ್ದಾರೆ. ಅವರು ಪ್ರಾದೇಶಿಕ ಸ್ಥಿರತೆಯತ್ತ ಗಮನ ಹರಿಸಿ, ಅಮೆರಿಕಾದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಕಾಪಾಡಲಿದ್ದಾರೆ" ಎಂದು ಹೇಳಿದ್ದಾರೆ.
ಸಂಪುಟ ಹಂತದ ವಿಶ್ವಸಂಸ್ಥೆಯ ರಾಯಭಾರಿ ಹುದ್ದೆಗೆ ನಿಕ್ಕಿ ಹೇಲಿ ಅವರನ್ನು ನೇಮಿಸಿದಂತೆಯೇ, ಟಿಲ್ಲರ್ಸನ್ ಅವರಿಗೆ ಕೂಡ ಯಾವುದೇ ರಾಜತಾಂತ್ರಿಕ ಅನುಭವವಾಗಲಿ ಅಥವಾ ಸರ್ಕಾರ ಮತ್ತು ಅಧ್ಯಯನ ಹಂತದಲ್ಲಿ ಯಾವುದೇ ವಿದೇಶಾಂಗ ಚಟುವಟಿಕೆಯಲ್ಲಿ ಭಾಗಿಯಾದ ಅನುಭವವಾಗಲಿ ಇಲ್ಲ. ಒಟ್ಟಿನಲ್ಲಿ ಈ ನೇಮಕದೊಂದಿಗೆ ಅಮೆರಿಕಾದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಯ ನೇಮಕಾತಿ ವಿಚಾರದಲ್ಲಿ ಎದ್ದಿದ್ದ ಊಹಾಪೋಹಕ್ಕೆ ತಡೆ ಹಾಕಲಾಗಿದೆ.
೬೪ ವರ್ಷದ ಟಿಲ್ಲರ್ಸನ್ ಟೆಕ್ಸಾಸ್ ರಾಜ್ಯದವರಾಗಿದ್ದು, ೫೦ ದೇಶಗಳಲ್ಲಿ ಚಟುವಟಿಕೆ ನಡೆಸುವ ಸಂಸ್ಥೆಯನ್ನು ಮುನ್ನಡೆಸುತ್ತಾರೆ.
ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮುಖ್ಯಸ್ಥನಾಗಿರುವುದಕ್ಕೆ ಮತ್ತು ರಷ್ಯಾದ ಜೊತೆಗೆ ವ್ಯಾವಹಾರಿಕ ಸಂಬಂಧ ಹೊಂದಿರುವುದಕ್ಕೆ ಅವರ ನೇಮಕಾತಿ ವಿವಾದ ಸೃಷ್ಟಿಸಿದೆ.