ವಿದೇಶ

ಬಲೂಚಿಯಲ್ಲಿ ಪಾಕ್ ನರಮೇಧ: ಸೇನೆಯ ದೌರ್ಜನ್ಯಕ್ಕೆ ಸಾಕ್ಷಿಯಾದ ಚಿತ್ರಗಳು

Manjula VN

ನವದೆಹಲಿ: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ನರಮೇಧ ದಿನದಿನಕ್ಕೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಸಾಕ್ಷಿಯೆಂಬಂತೆ ಸಾಮಾಜಿಕ ಜಾಲತಾಣವೊಂದರಲ್ಲಿ ಬಲೂಚಿಸ್ತಾನದಲ್ಲಿರುವ ಪರಿಸ್ಥಿತಿ ಕುರಿತ ಚಿತ್ರಗಳನ್ನು ಪೋಸ್ಟ್ ಮಾಡಿ ಬಲೂಚಿಸ್ತಾನ ಮಹಿಳೆಯೊಬ್ಬರು ಪಾಕಿಸ್ತಾನ ಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅತೀವ್ರವಾಗಿದ್ದು, ಪ್ರಾಣಿಗಳಿಗಿರುವಷ್ಟು ಹಕ್ಕು ಬಲೂಚಿಸ್ತಾನದಲ್ಲಿರುವ ಮನುಷ್ಯರಿಗಿಲ್ಲದಂತಾಗಿದೆ ಎಂದು ಹೇಳಿ ಅಲ್ಲಿನ ಜನತೆ ಪ್ರತೀನಿತ್ಯ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಅಲ್ಲದೆ, ಮಾನವ ಹಕ್ಕುಗಳ ದಿನಾಚರಣೆಯನ್ನು ಘೋಷಣೆ ಮಾಡಿರುವ ವಿಶ್ವಸಂಸ್ಥೆ, ಬಲೂಚಿಸ್ತಾನದಲ್ಲಿ ನರಮೇಧಗಳಂತಹ ಕೃತ್ಯಗಳು ನಡೆಯುತ್ತಿದ್ದರೂ ಮೌನವಹಿಸಿರುವುದಕ್ಕೆ ಬಲೂಚಿಸ್ತಾನದಲ್ಲಿರುವ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮಧ್ಯೆಯೇ ಪಾಕಿಸ್ತಾನದ ದೌರ್ಜನ್ಯ ಹಾಗೂ ನರಮೇಧಕ್ಕೆ ಸಾಕ್ಷಿಯೆಂಬಂತೆ ಮಹಿಳೆಯೊಬ್ಬರು ಬಲೂಚಿಸ್ತಾನದಲ್ಲಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ವಿರುದ್ಧ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಹಂಚಿಕೊಂಡಿರುವ ಚಿತ್ರಗಳು ಹೃದಯ ಕಲಕುವಂತಿದ್ದು, ರಸ್ತೆಗಳ ಎಕ್ಕೆಲಗಳಲ್ಲೂ ಮನುಷ್ಯರ ಮೃತ ದೇಹಗಳು, ಸಾಮಾನ್ಯ ಜನರ ಮೇಲೆ ಪಾಕಿಸ್ತಾನ ಸೇನೆ ನಡೆಸುತ್ತಿರುವ ದೌರ್ಜನ್ಯಗಳನ್ನು ಎತ್ತಿತೋರಿಸುತ್ತಿದೆ. ಅಲ್ಲದೆ, ಅಂತಿಮ ಸಂಸ್ಕಾರವಿಲ್ಲದೆಯೇ ಮೃತ ದೇಹಗಳು ರಸ್ತೆಗಳ ಮಧ್ಯೆಯೇ ಬಿದ್ದಿರುವುದು ಬಲೂಚಿಸ್ತಾನದಲ್ಲಿರುವ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ.

ಬಾನುಕ್ ಶ್ರೀನಿ ಬಲೂಚ್ ಎಂಬುವವರು ಟ್ವಿಟರ್ ನಲ್ಲಿ ಈ ಚಿತ್ರಗಳನ್ನು ಹಂಚಿಕೆ ಮಾಡಿದ್ದು, ಪಾಕಿಸ್ತಾನದಿಂದ ವಿಶ್ವವನ್ನು ರಕ್ಷಿಸಿ. ಪಾಕಿಸ್ತಾನ ವಿಶ್ವಕ್ಕೆ ಮಾರಕವಾದ ದೇಶವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವಾಗಿದ್ದು, ವಿಶ್ವ ಸಮುದಾಯ ಇದನ್ನು ಬಹಿರಂಗ ಪಡಿಸಬೇಕಿದೆ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT