ವಿದೇಶ

ಜರ್ಮನಿಯ ಬೃಹತ್ ಶಾಪಿಂಗ್ ಮಾಲ್ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ!

Srinivasamurthy VN

ಬರ್ಲಿನ್: ಜರ್ಮನಿಯ ಬೃಹತ್ ಶಾಪಿಂಗ್ ಮಾಲ್ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಬರ್ಲಿನ್ ಮೇಲೆ ನಡೆದ ದಾಳಿ ಬೆನ್ನಲ್ಲೇ ಜರ್ಮನಿಯಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಜರ್ಮನಿಯ ಒಬರ್ಹಾಸೆನ್ನಲ್ಲಿರುವ ಪ್ರತಿಷ್ಟಿತ ಶಾಪಿಂಗ್ ಮಾಲ್ ನಲ್ಲಿ  ವಿಧ್ವಂಸಕ ಕೃತ್ಯವೆಸಗಲು ಹವಣಿಸುತ್ತಿದ್ದ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಶಂಕಿತ ಉಗ್ರರನ್ನು ವಿಚಾರಣೆ ನಡೆಸಲಾಗಿ ಇವರು ಕೊಸೊವೋ ಮೂಲದವರು ಎಂದು ತಿಳಿದುಬಂದಿದೆ. ಇಬ್ಬರೂ ತಲಾ  28 ವರ್ಷ ಮತ್ತು 31 ವರ್ಷ ವಯಸ್ಸಿನವರಾಗಿದ್ದು, ಜರ್ಮನಿಯ ದಿಸ್ಬರ್ಗ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶಂಕಿತ ಉಗ್ರರು ಶಾಪಿಂಗ್ ಮಾಲ್ ನಲ್ಲಿ ಸಂಚರಿಸುತ್ತಾ ಅಲ್ಲಿದ್ದ ಭದ್ರತಾ ಪಡೆಗಳ ಯೋಧರ ಬಗ್ಗೆ ಮಾಹಿತಿ ಕಲೆಹಾಕಿದ್ದರು ಮತ್ತು ಯಾವ ರೀತಿ ದಾಳಿ ನಡೆಸಿದರೆ ಹೆಚ್ಚು ಹಾನಿಯನ್ನುಂಟು ಮಾಡಬಹುದು ಎಂದು  ಯೋಜನೆ ರೂಪಿಸಿದ್ದರು ಎಂದು ಪೊಲೀಸರು  ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜರ್ಮನಿಯಾದ್ಯಂತ  ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಭದ್ರತಾ ಪಡೆಗಳಿಗೆ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

SCROLL FOR NEXT