ವಿದೇಶ

ಅಮೆರಿಕ ಮೇಲೆ ಐಎಸ್ ದಾಳಿ ಸಾಧ್ಯತೆ: ಗುಪ್ತಚರ ಸಂಸ್ಥೆ

Rashmi Kasaragodu
ವಾಷಿಂಗ್ಟನ್: ಅಮೆರಿಕದ ಮೇಲೆ ಮತ್ತೊಮ್ಮೆ ಉಗ್ರದಾಳಿ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ಉಗ್ರ ದಾಳಿ ನಡೆದುದಕ್ಕೆ ಗುಪ್ತಚರ ಇಲಾಖೆಯ  ವೈಫಲ್ಯವೇ ಕಾರಣ ಎಂದು ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್  ಏಜೆನ್ಸಿ) ಮುಖ್ಯಸ್ಥ ಜಾನ್ ಬ್ರೇನನ್ ಹೇಳಿದ್ದಾರೆ. 
ಪ್ಯಾರಿಸ್ ದಾಳಿ ನಂತರ ಇಸ್ಲಾಮಿಕ್ ಉಗ್ರರ ಯೋಜನೆಗಳೇನು? ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದ್ದರೂ ಅವರು ಅಮೆರಿಕ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವಿಷಯವನ್ನು ತಳ್ಳಿ ಹಾಕುವಂತಿಲ್ಲ ಎಂದು ಬ್ರೆನನ್ ಹೇಳಿದ್ದಾರೆ.  ಉಗ್ರರು ಹೊಸ ರೀತಿಯಲ್ಲಿ  ಸಂವಹನ ನಡೆಸುವ ಮೂಲಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇವುಗಳನ್ನು ಪತ್ತೆ ಹಚ್ಚುವುದು ಗುಪ್ತಚರ ಇಲಾಖೆಗೆ ಸವಾಲಿನ ಕೆಲಸವಾಗಿದೆ.
130 ಜನರು ಹತ್ಯೆಗೀಡಾದ ಪ್ಯಾರಿಸ್ ಉಗ್ರದಾಳಿಯಲ್ಲಿ 8 ಉಗ್ರರ ಪೈಕಿ ಏಳು ಜನರೂ ಫ್ರೆಂಚ್ ನಾಗರಿಕರಾಗಿದ್ದರು. ಇವರೆಲ್ಲರೂ ಸಿರಿಯಾಗೆ ಹೋಗಿ ಅಲ್ಲಿ ವಿಶೇಷ ರೀತಿಯ ತರಬೇತಿ ಪಡೆದು ಬಂದಿದ್ದು ಯಾರಿಗೂ ಗೊತ್ತಾಗಲೇ ಇಲ್ಲ ಎಂದು ಸಿಬಿಎಸ್ ಗೆ ನೀಡಿದ ಸಂದರ್ಶನದಲ್ಲಿ ಬ್ರೆನನ್ ಹೇಳಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಇಸ್ಲಾಮಿಕ್ ರಾಷ್ಟ್ರಗಳ ನಡುವೆ ಸಂಘರ್ಷವೇರ್ಪಡಿಸಿ ಅದರ ಲಾಭ ಪಡೆಯಲು ಉಗ್ರರು ಯತ್ನಿಸುತ್ತಿದ್ದಾರೆ. ಇಸ್ಲಾಮಿಕ್ ರಾಷ್ಟ್ರಗಳ ಮೇಲೆ ಅಮೆರಿಕ ಅಧಿಪತ್ಯ ಸಾಧಿಸಲು ಯತ್ನಿಸುತ್ತಿದ್ದೆ ಎಂಬ ಸುದ್ದಿ ಸೃಷ್ಟಿಸಿ ಉಗ್ರರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಬ್ರೆನನ್ ಹೇಳಿಕೆ ನೀಡಿದ್ದಾರೆ.
SCROLL FOR NEXT