ಫ್ಯಾಕ್ಟರಿಯ ಹೊರಗೆ ಪೊಲೀಸರು ಜಮಾಯಿಸಿರುವುದು
ಕನ್ಸಾಸ್: ಅಮೆರಿಕದ ಕನ್ಸಾಸ್ ನಗರದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಖಾಸಗಿ ಫ್ಯಾಕ್ಟರಿಯ ನೌಕರನೊಬ್ಬ ಗುರುವಾರ ಫ್ಯಾಕ್ಟರಿ ಒಳಗೆ ಗುಂಡು ಹಾರಿಸಿದ್ದು, ಈ ದಾಳಿಗೆ ನಾಲ್ವರು ಹತ್ಯೆಗೀಡಾಗಿದ್ದಾರೆ. ಸುಮಾರು 30 ಮಂದಿಗೆ ಗಾಯಗಳಾಗಿವೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ದಾಳಿಯಲ್ಲಿ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅದೇ ಫ್ಯಾಕ್ಟರಿಯ ನೌಕರನಾದ ಸೆಡ್ರಿಕ್ ಫೋರ್ಡ್ ಎಂಬಾತನೇ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಫೋರ್ಡ್ ಫ್ಯಾಕ್ಟರಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರೈಫಲ್ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಫೋರ್ಡ್ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಪಾರ್ಕಿಂಗ್ ಸ್ಥಳದಲ್ಲಿದ್ದ ಓರ್ವ ಮಹಿಳೆಯ ಮೇಲೆ ಈತ ಮೊದಲು ಗುಂಡು ಹಾರಿಸಿದ್ದನು. ನಂತರ ಫ್ಯಾಕ್ಟರಿ ಒಳಗೆ ಬಂದು ಯದ್ವಾತದ್ವ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ದಾಳಿಗೆ ಕಾರಣ ಏನೆಂಬುದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.