ಕಾಬೂಲ್/ನವದೆಹಲಿ: ಪಂಜಾಬ್‍ನ ಪಠಾಣ್‍ಕೋಟ್‍ನಲ್ಲಿ ಉಗ್ರರು ಐಎಎಫ್ ನೆಲೆ ಮೇಲೆ ದಾಳಿ ಬಿಕ್ಕಟ್ಟು ಮುಂದುವರಿದಿರುವಾಗಲೇ ಆಫ್ಘಾನಿಸ್ತಾನದ ಭಾಲ್ಕ್ ಪ್ರಾಂತ್ಯದ ರಾಜಧಾನಿ ಮಜಾರ್ -ಎ-ಷರೀಫ್ ನಲ್ಲಿ ಭಾರತೀಯ ದೂತಾವಾಸದ ಮೇಲೆ ದಾಳಿ ನಡೆದಿದೆ.
ನಾಲ್ವರು ಅಪರಿಚಿತ ಬಂದೂಕುಧಾರಿಗಳು ಬಾಂಬ್ ಸ್ಫೋಟಿಸಿ, ಗುಂಡು ಹಾರಿಸುತ್ತಾ ಕಟ್ಟಡ ಒಳ ಪ್ರವೇಶಿಸುವ ಪ್ರಯತ್ನ ನಡೆಸಿದರು ಎಂದು ದೂತಾವಾಸದ ಹಿರಿಯ ಅಧಿಕಾರಿ ಬಿ.ಸರ್ಕಾರ್ ಮಾತನಾಡಿ ``ಎಲ್ಲರೂ ಸುರಕ್ಷಿತರಾಗಿದ್ದಾರೆ. ಬಂದೂಕುಧಾರಿಗಳ ಜತೆ 20 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು'' ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ಸುದ್ದಿ ವಾಹಿನಿಗಳು ವರದಿ ಮಾಡಿರುವ ಗುಂಡಿನ ದಾಳಿ ನಡೆಸಿದ ನಾಲ್ವರ ಪೈಕಿ ಇಬ್ಬರನ್ನು ಗುಂಡಿಟ್ಟು ಸಾಯಿಸಲಾಗಿದೆ. ಕಟ್ಟಡದ ಭದ್ರತೆಯ ಉಸ್ತುವಾರಿ ಹೊತ್ತಿರುವ ಇಂಡೋ-ಟಿಬೆಟನ್ ಬೋರ್ಡರ್ ಫೋರ್ಸ್‍ನ ಹಿರಿಯ ಅಧಿಕಾರಿಗಳ ಪ್ರಕಾರ ಮಜಾರ್ -ಎ-ಷರೀಫ್ ನಲ್ಲಿ ಮತ್ತಿಬ್ಬರು ವ್ಯಕ್ತಿಗಳ ಜತೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಯಾವುದೇ ಒಂದು ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ. 2013ರ ಆಗಸ್ಟ್‍ನಲ್ಲಿ ಜಲಾಲಾಬಾದ್‍ನಲ್ಲಿ ಭಾರತೀಯ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಏಳು ಮಂದಿ ಮಕ್ಕಳು ಸೇರಿದಂತೆ ಒಂಭತ್ತು ಮಂದಿ ಅಸು ನೀಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಡಿ.25ರಂದು ಆಫ್ಘಾನಿಸ್ತಾನದಲ್ಲಿ ಭಾರತದ ನೆರವಿನಿಂದ ನಿರ್ಮಾಣವಾದ ಸಂಸತ್ ಭವನವನ್ನು ಉದ್ಘಾಟಿಸಿ ಸ್ವದೇಶಕ್ಕೆ ಹಿಂದಿರುಗಿದ ಹತ್ತು ದಿನಗಳಲ್ಲೇ ಈ ದಾಳಿ ನಡೆದಿರುವುದು ಗಮನಾರ್ಹ.
ಈ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ``ಆಫ್ಘಾನಿಸ್ತಾನ ತನ್ನ ನೆಲದ ಮೇಲೆ ನಡೆಯುವ ಉಗ್ರ ದಾಳಿಯನ್ನು ಎದುರಿಸಿ ನಿಂತಾಗ ಮಾತ್ರ ಯಶಸ್ಸು ಪಡೆಯಲಿದೆ. ಅದಕ್ಕಾಗಿ ಭಯೋತ್ಪಾದನೆಯ ನರ್ಸರಿಗಳನ್ನು ಮಟ್ಟ ಹಾಕಲೇಬೇಕು'' ಎಂದು ಪಾಕಿಸ್ತಾನದ ವಿರುದ್ಧ ಟೀಕಿಸಿದ್ದರು. ಇದಾದ ಬಳಿಕ ಅವರು ಪಾಕಿಸ್ತಾನಕ್ಕೆ ಹಠಾತ್ ಭೇಟಿ ನೀಡಿದ್ದರು.