ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು
ವಾಷಿಂಗ್ಟನ್: ಇರಾಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಹಣ ಕೂಡಿಟ್ಟಿದ್ದ ಕಟ್ಟಡಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಯುದ್ಧಕ್ಕೆ ಅಗತ್ಯವಾದ ಹಣವನ್ನು ಇಸಿಸ್ ಈ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದು, ಎಷ್ಟು ಮೌಲ್ಯದ ಕರೆನ್ಸಿಯನ್ನು ನಾಶ ಮಾಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.
ಇರಾಕ್‌ನ ಮಸೂಲ್ ನಗರದಲ್ಲಿರುವ ಕಟ್ಟಡಗಳ ಮೇಲೆ ಭಾನುವಾರ ದಾಳಿ ನಡೆಸಿದ್ದು, ಇಲ್ಲಿ ಯಾವ ಕರೆನ್ಸಿಯನ್ನು ಕೂಡಿಟ್ಟಿದ್ದರು ಎಂಬುದರ ಬಗ್ಗೆಯೂ ಮಾಹಿತಿ ಲಭಿಸಿಲ್ಲ.
ಮಸೂಲ್ ನಲ್ಲಿರುವ ಇಸಿಸ್ ಖಜಾನೆಯ ಕಾರ್ಯ ಕಲಾಪಗಳ ಮೇಲೆ ತಿಂಗಳ ಹಿಂದೆಯೇ ಅಮೆರಿಕ ಕಣ್ಣಿಟ್ಟಿತ್ತು. ಜನನಿಬಿಡ ಪ್ರದೇಶವಾಗಿದ್ದರಿಂದ, ಜನರು ಕಡಿಮೆ ಇದ್ದ ವೇಳೆಯಲ್ಲಿ ಅಮೆರಿಕ ಸೈನ್ಯ ಇಲ್ಲಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ.
ಇದೀಗ ನಾಶ ಪಡಿಸಿದ ಕರೆನ್ಸಿ ಅಮೆರಿಕನ್ ಡಾಲರ್ ಆಗಿದೆಯೋ, ಸ್ಥಳೀಯ ದಿನಾರ್ ಅಥವಾ ವಿದೇಶಿ ಕರೆನ್ಸಿಯೋ ಎಂಬುದರ ಬಗ್ಗೆ ತಿಳಿದಿಲ್ಲವಾಗಿದ್ದರೂ ಕೋಟಿಗಟ್ಟಲೆ ಮೌಲ್ಯದ ಹಣ ನಾಶವಾಗಿದೆ ಎಂದು ಹೇಳಲಾಗುತ್ತಿದೆ.