ಜಕಾರ್ತಾ: ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ಗುರುವಾರ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಶುಕ್ರವಾರ ಮೂವರು ಶಂಕಿತರನ್ನು ಬಂಧಿಸಲಾಗಿದೆ.
ಈ ಪೈಕಿ ಒಬ್ಬ ದಾಳಿಕೋರನ ಮನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಧ್ವಜ ಪತ್ತೆಯಾಗಿದ್ದು, ದಾಳಿಯಲ್ಲಿ ಐಎಸ್ ಕೈವಾಡವಿದೆ ಎಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಜಕಾರ್ತಾ ಹೊರವಲಯದಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಯಿತು ಎಂದು ತನಿಖಾ ನಿರ್ದೇಶಕ ಕರ್ನಲ್ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಐಎಸ್‍ನಿಂದ ಮತ್ತಷ್ಟು ದಾಳಿ ಸಾಧ್ಯತೆ ಇರುವ ಕಾರಣ ಇಂಡೋನೇಷ್ಯಾದಾದ್ಯಂತ ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪೊಲೀಸ್ ಠಾಣೆಗಗಳು, ಸರ್ಕಾರಿ ಕಚೇರಿಗಳು, ರಾಯಭಾರ ಕಚೇರಿಗಳು ಸೇರಿದಂತೆ ದೇಶಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಉಗ್ರರು ಸ್ಟಾರ್‍ಬಕ್ ಕೆಫೆ ಸೇರಿದಂತೆ ಹಲವೆಡೆ ಗುಂಡಿನ ದಾಳಿ ಹಾಗೂ ಸ್ಫೋಟಗಳನ್ನು ನಡೆಸಿದ್ದರು. ಪರಿಣಾಮ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಎಲ್ಲ 5 ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು.
ಸೊಮಾಲಿಯಾದಲ್ಲಿ ದಾಳಿ: ಶುಕ್ರವಾರ ಸೊಮಾಲಿಯಾದ ನೈರುತ್ಯ ಭಾಗದಲ್ಲಿರುವ ಆಫ್ರಿಕನ್ ಒಕ್ಕೂಟದ ಸೇನಾನೆಲೆಯಲ್ಲಿ ಅಲ್‍ಖೈದಾ ನಂಟಿರುವ ಶೆಬಾಬ್ ಉಗ್ರರು ದಾಳಿ ನಡೆಸಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಸೊಮಾಲಿ ಸೇನೆ ತಿಳಿಸಿದೆ. ಆದರೆ, ಉಗ್ರರು ಮಾತ್ರ, ನಾವು 63 ಕೀನ್ಯಾ ಸೈನಿಕರನ್ನು ಕೊಂದೆವು ಎಂದು ಘೋಷಿಸಿದ್ದಾರೆ.