ಢಾಕಾ ಭಯೋತ್ಪಾದಕ ದಾಳಿಯ ಒಂದು ದೃಶ್ಯ
ನವದೆಹಲಿ: ಢಾಕಾದಲ್ಲಿ ಶುಕ್ರವಾರ ಭಯೋತ್ಪಾದಕರು ನಡೆಸಿದ ಮಾರಣಹೋಮದಲ್ಲೂ ಗೆಳೆತನವನ್ನು ಮೆರೆದ ಮನಕಲಕುವ ಘಟನೆ ಸಂಭವಿಸಿದೆ.
ಮಾಧ್ಯಮ ವರದಿಗಳ ಪ್ರಕಾರ ಹೋಲಿ ಆರ್ಟಿಸನ್ ಬೇಕರಿಯಲ್ಲಿ ಭಯೋತ್ಪಾದಕರು ದಾಳಿ ಮಾಡಿದಾಗ ತರಿಶಿ ಜೈನ್ ತನ್ನಿಬ್ಬರು ಗೆಳೆಯರೊಂದಿಗೆ ಶೌಚಾಲಯದಲ್ಲಿ ಅಡಗಿ ಕೂತಿದ್ದಳು. ತರಿಶಿ ತನ್ನ ಗೆಳೆಯರಾದ ಫರಾಜ್ ಹುಸೇನ್ ಮತ್ತು ಅಬಿಂತಾ ಕಬೀರ್ ಅವರೊಂದಿಗೆ ಭಯೋತ್ಪಾದಕರ ಕಣ್ತಪ್ಪಿಸಿ ತಪ್ಪಸಿಕೊಳ್ಳುವ ಯೋಚನೆಯಲ್ಲಿದ್ದರು ಅದೃಷ್ಟ ಅವರ ಕೈನಲ್ಲಿರಲಿಲ್ಲ.
ಢಾಕಾ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದ ಈ ಗೆಳೆಯರನ್ನು ಭಯೋತ್ಪಾದಕರು ಬರ್ಬರವಾಗಿ ಹತ್ಯೆ ಮಾಡಿದರು, ಗೆಳೆತನವನ್ನು ಮೆರೆದ ಮಾನವೀಯ ಘಟನೆ ಇದು.
ಮಾಧ್ಯಮಗಳ ವರದಿ ಪ್ರಕಾರ ಭಯೋತ್ಪಾದಕರು ತನ್ನ ಗೆಳತಿಯರನ್ನು ಬಿಟ್ಟು ಹೊರಹೋಗುವಂತೆ ಫರಾಜ್ ಹುಸೇನ್ ಗೆ ತಿಳಿಸಿದ್ದರು ಅವನು ನಿರಾಕರಿಸಿದ್ದಾನೆ.
"ತರಿಶಿ ಮತ್ತು ಅಬಿಂತಾ ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಿದ್ದರಿಂದ ಫರಾಜ್ ಗೆ ಹೊರಹೋಗುವಂತೆ ತಿಳಿಸಿದ್ದಾರೆ. ಆದರೆ ತನ್ನ ಗೆಳೆಯರನ್ನು ತೊರೆದು ಹೋಗಲು ಫರಾಜ್ ನಿರಾಕರಿಸಿದ" ಎಂದು ಮಾಧ್ಯಮಗಳು ವರದಿ ಮಾಡಿವೆ.
ನಂತರ ಬರ್ಬರವಾಗಿ ಹತ್ಯೆಗಯ್ಯಲಾದ 20 ಜನರಲ್ಲಿ ಈ ಮೂವರು ಸೇರಿದ್ದರು ಎಂದು ಬದುಕುಳಿದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಹತ್ಯೆಯಾದವರಲ್ಲಿ ಎಂಟು ಇಟಾಲಿಯನ್ ನಾಗರಿಕರು, ಏಳು ಜಪಾನಿಯರು ಮತ್ತು ಒಬ್ಬ ಭಾರತೀಯ ವಿದ್ಯಾರ್ಥಿ ಸೇರಿದ್ದಾರೆ. ಬಾಂಗ್ಲಾ ಇತಿಹಾಸದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಆರು ಭಯೋತ್ಪಾದಕರನ್ನು ಹತ್ಯೆಗೈದು ಒಬ್ಬನನ್ನು ಸಜೀವವಾಗಿ ಹಿಡಿಯಲಾಗಿದೆ.