ವಿದೇಶ

ಭಾರತ ಇನ್ನೂ 1962 ರ ಯುದ್ಧದ ಸೋಲಿನ ಮನಸ್ಥಿತಿಯಲ್ಲೇ ಇದೆ: ಚೀನಾ

Srinivas Rao BV

ಬೀಜಿಂಗ್: ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿದ್ದಕ್ಕೆ ಭಾರತ ತನ್ನ ವಿರುದ್ಧ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ಭಾರತ ಇನ್ನೂ 1962 ರ ಸೋಲಿನ ಮನಸ್ಥಿತಿಯಲ್ಲೇ ಇದೆ ಎಂದು ಟೀಕಿಸಿದೆ. ಸಿಯೋಲ್ ನಲ್ಲಿ ನಡೆದ ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳ ಸಭೆಯ ಫಲಿತಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಭಾರತ ಸಿದ್ಧವಿಲ್ಲ ಎಂದು ತೋರುತ್ತದೆ.

ಎನ್ ಎಸ್ ಜಿ ಸದಸ್ಯತ್ವ ಸಿಗದೇ ಇರುವುದಕ್ಕೆ ಚೀನಾವನ್ನು ಹೊಣೆ ಮಾಡಿರುವ ಭಾರತದ ಅನೇಕ ಮಾಧ್ಯಮಗಳು ಚೀನಾ ಪಾಕಿಸ್ತಾನದ ಪರ, ಭಾರತದ ವಿರೋಧಿ ನಿಲುವೇ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಕಾರಣ ಎಂದು ವಿಶ್ಲೇಷಿಸಿದ್ದವು. ಭಾರತದ ಮಾಧ್ಯಮಗಳ ವಿಶ್ಲೇಷಣೆ ಹಾಗೂ ಅಲ್ಲಿನ ಕಾರ್ಯಕರ್ತರು ಚೀನಾದ ನಡೆಯನ್ನು ತಪ್ಪಾಗಿ ಅರ್ಥೈಸಿದ್ದು ಇದು ಭಾರತ- ಚೀನಾ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಗ್ಲೋಬಲ್ ಟೈಮ್ಸ್ ಪ್ರಕಟಿಸಿರುವ ಲೇಖನದಲ್ಲಿ ಹೇಳಿದೆ.

ಎನ್ ಎಸ್ ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವ ಭಾರತ ಚೀನಾ ವಿರುದ್ಧದ 1962 ರ ಸೋಲಿನ ಮನಸ್ಥಿತಿಯಲ್ಲೇ ಇರುವಂತಿದೆ, ಚೀನಾ ಭಾರತದ ಏಳಿಗೆಯನ್ನು ಸಹಿಸುವುದಿಲ್ಲ ಎಂಬ ವಿಶ್ಲೇಷಣೆಯೇ ಈಗಲೂ ಕೇಳಿಬರುತ್ತಿದೆ. ಒಂದು ವೇಳೆ ಭಾರತ ಹಾಗಂದುಕೊಂಡಿದ್ದಾರೆ ಅದು ಚೀನಾವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದಿರುವ ಗ್ಲೋಬಲ್ ಟೈಮ್ಸ್ ಲೇಖನ ಚೀನಾ ಭಾರತವನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡುವುದನ್ನು ಬಿಟ್ಟಿದ್ದು ಆರ್ಥಿಕ ಸಹಕಾರದ ದೃಷ್ಟಿಯಿಂದ ನೋಡುತ್ತಿದೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಎನ್ ಎಸ್ ಜಿ ಸದಸ್ಯತ್ವ ಪಡೆಯುವ ರಾಷ್ಟ್ರಗಳು ಎನ್ ಪಿಟಿಗೆ ಸಹಿ ಹಾಕಿರಬೇಕೆಂಬುದು ಚೀನಾದ ಪ್ರಬಲ ವಾದವಾಗಿದೆ. ಭಾರತ ಚೀನಾವನ್ನು ಉದ್ದೇಶವನ್ನು ಸರಿಯಾಗಿ ಗ್ರಹಿಸಬೇಕಿದೆ. ಚೀನಾವನ್ನು ತಪ್ಪಾಗಿ ಅರ್ಥೈಸುವುದನ್ನು ಬಿಟ್ಟು ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯುವತ್ತ ಹಾಮಾನಾ ಕೇಂದ್ರೀಕರಿಸಲಿ ಎಂದು ಚೀನಾ ಮಾಧ್ಯಮ ಹೇಳಿದೆ.

SCROLL FOR NEXT