ಪ್ರಧಾನಿ ಮೋದಿ ಹಾಗೂ ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯೂಸಿ
ಮಾಪುಟೊ: ಕೃಷಿ, ರಕ್ಷಣೆ, ಔಷಧ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಗುರುವಾರ ಭಾರತ ಹಾಗೂ ಮೊಜಾಂಬಿಕ್ ಸಹಿ ಹಾಕಿವೆ.
ಆಫ್ರಿಕಾದ ನಾಲ್ಕು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೊಜಾಂಬಿಕ್ ಗೆ ಭೇಟಿ ನೀಡಿದ್ದು, ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯೂಸಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಮೊಜಾಂಬಿಕ್ನಿಂದ ಧಾನ್ಯಗಳ ಖರೀದಿಗೆ ಸಂಬಂಧಪಟ್ಟಂತೆ ದೀರ್ಘಾವಧಿ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.
ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕವಾಗಿ ಭಯೋತ್ಪಾದನೆ ನಮ್ಮ ಭದ್ರತೆಗೆ ಪ್ರಮುಖ ಅಪಾಯವನ್ನು ತಂದೊಡ್ಡಿದೆ. ಆ ನಿಟ್ಟಿನಲ್ಲಿ ಅಧ್ಯಕ್ಷರು(ಫಿಲಿಪ್) ಮತ್ತು ನಾನು ದೇಶದ ರಕ್ಷಣೆ ಮತ್ತು ಭದ್ರತಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು.
ಉಭಯ ದೇಶಗಳ ನಡುವೆ ಪ್ರಮುಖವಾಗಿ ಆಹಾರ ಭದ್ರತೆ ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಆ ನೆಲೆಯಲ್ಲಿ ಕೃಷಿ ಸಹಕಾರಕ್ಕೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಮೋದಿ ಹೇಳಿದರು.
ಇಂದು ಮೊಜಾಂಬಿಕ್ ರಾಜಧಾನಿ ಮಾಪುಟೋಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ನಾಳೆ ದಕ್ಷಿಣ ಆಫ್ರಿಕಾ, ತಾಂಜನೀಯಾ ಹಾಗೂ ಕೀನ್ಯಾಕ್ಕೆ ಭೇಟಿ ನೀಡಲಿದ್ದಾರೆ.