ವಿದೇಶ

ತಾಂಜೇನಿಯಾಗೆ 92 ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

Srinivas Rao BV

ದಾರ್-ಎಸ್-ಸಲಾಮ್: ತಾಂಜೇನಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸರ್ಕಾರಕ್ಕೆ ಸಾಲ ರೂಪದಲ್ಲಿ 92 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ತಾಂಜೇನಿಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ 5 ಒಪ್ಪಂದಗಳಿಗೆ ಸಹಿ ಹಾಕಿದ್ದು, ಜಲಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ತಾಂಜೇನಿಯಾಗೆ 92 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಿಸಿರುವ ಒಪ್ಪಂದವೂ ಈ ಪೈಕಿ ಒಂದಾಗಿದೆ.

ತಾಂಜೇನಿಯಾವನ್ನು ಭಾರತದ ನಂಬಿಕಸ್ಥ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಹಾಗೂ ತಾಂಜೇನಿಯಾದ ಅಧ್ಯಕ್ಷರು ಉಭಯ ದೇಶಗಳ ಭದ್ರತಾ ಸಹಕಾರ, ರಕ್ಷಣಾ ವಲಯದಲ್ಲಿನ ಸಹಕಾರ ಹಾಗೂ ಪ್ರಮುಖವಾಗಿ ಕಡಲ ತೀರದ ಭದ್ರತೆ ವಿಷಯದಲ್ಲಿ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಭಾರತ ತಾಂಜೇನಿಯಾದೊಂದಿಗೆ ಜಲಸಂಪನ್ಮೂಲ ನಿರ್ವಹಣೆ, ಅಭಿವೃದ್ಧಿ, ವೃತ್ತಿಪರ ತರಬೇತಿ ಕೇಂದ್ರ ಸ್ಥಾಪನೆ, ರಾಜತಾಂತ್ರಿಕ / ಅಧಿಕೃತ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾದಿಂದ ವಿನಾಯ್ತಿ ಹಾಗೂ ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ಹಾಗೂ ತಾಂಜೇನಿಯಾದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ ನಡುವಿನ ಒಪ್ಪಂದ ಸೇರಿದಂತೆ ಒಟ್ಟು 5 ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದ್ದಾರೆ.ತಾಂಜೇನಿಯಾದ 17 ನಗರಗಳಲ್ಲಿ ಉಭಯ ದೇಶಗಳು ಹಲವು ನೀರಿಗೆ ಸಂಬಂಧಿಸಿದ ಯೋಜನೆಗಳಿಗೆ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ಭಾರತ ತಾಂಜೇನಿಯಾಗೆ ಹೆಚ್ಚಿವರಿ 500 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ರಿಯಾಯಿತಿ ದರದಲ್ಲಿ ನೀಡಲಿದೆ ಎಂದು ಮೋದಿ ಘೋಷಿಸಿದ್ದಾರೆ.

SCROLL FOR NEXT