ತೈಪೆ: ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಅಧಿಕಾರವಿಲ್ಲ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಧೀಕರಣ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೇ ದಕ್ಷಿಣ ಚೀನಾ ಸಮುದ್ರದ ತನ್ನ ಪಾಲಿನ ಪ್ರದೇಶವನ್ನು ರಕ್ಷಿಸಲು ತೈವಾನ್ ಯುದ್ಧ ನೌಕೆಯನ್ನು ಕಳುಹಿಸಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧ ನೌಕೆ ರವಾನಿಸಿದ ನಂತರ ಮಾತನಾಡಿದ ತೈವಾನ್ ಅಧ್ಯಕ್ಷ ತ್ಸಯ್ ಇಂಗ್ ವೆನ್ ಅವರು, ಸ್ಪಾರ್ಟ್ಲಿ ದ್ವೀಪ ಸಮೂಹದಲ್ಲಿ ತೈವಾನ್ ಆಡಳಿತಕ್ಕೆ ಒಳಪಟ್ಟಿರುವ ದ್ವೀಪವನ್ನು ರಕ್ಷಿಸಲು ನಾವು ಯುದ್ಧ ನೌಕೆ ಕಳುಹಿಸುತ್ತಿದ್ದೇವೆ. ತೈವಾನ್ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ನಮ್ಮ ಯುದ್ಧ ನೌಕೆಗಳು ಗಸ್ತು ತಿರುಗುವುದರಿಂದ ಸರ್ಕಾರ ತೈವಾನ್ನ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ ಎಂಬುದು ಜನತೆಗೆ ತಿಳಿಯಲಿದೆ ಎಂದು ಇಂಗ್ ವೆನ್ ತಿಳಿಸಿದ್ದಾರೆ.
ತೈವಾನ್ ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಪ್ರಾಮುಖ್ಯತೆ ನೀಡಲಿದೆ. ಇದು ದೇಶದ ಸಾರ್ವಭೌಮತೆಯ ಪ್ರಶ್ನೆ, ಗಡಿ ರಕ್ಷಣೆಗಾಗಿ ನಿರಂತರವಾಗಿ ಯುದ್ಧ ನೌಕೆಗಳು ಮತ್ತು ವಿಮಾನಗಳನ್ನು ಕಳಹಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತೈಪಿಂಗ್ ಎನ್ನುವುದು ಒಂದು ದ್ವೀಪ. ಕಲ್ಲು ಬಂಡೆ ಅಲ್ಲ ಎಂದು ಸಾಬೀತು ಪಡಿಸಲು ತೈವಾನ್ನ ಮಾಜಿ ಆಧ್ಯಕ್ಷ ಮಾ ಯಿಂಗ್ ಜುಯಿ ಜನವರಿಯಲ್ಲಿ ತೈಪಿಂಗ್ಗೆ ಭೇಟಿ ನೀಡಿದ್ದರು. ಸ್ಪಾರ್ಟ್ಲಿ ದ್ವೀಪ ಸಮೂಹದ ಮೇಲೆ ಚೀನಾ, ವಿಯೆಟ್ನಾಂ, ಫಿಲಿಫೈನ್ಸ್, ಮಲೇಷ್ಯಾ, ಬ್ರೂನಯಿ ಮತ್ತು ತೈವಾನ್ ತಮ್ಮ ಅಧಿಕಾರವಿದೆ ಎಂದು ತಿಳಿಸುತ್ತಾ ಬಂದಿವೆ. ಇದು ವಿವಾದಕ್ಕೆ ಕಾರಣವಾಗಿದ್ದು, ಚೀನಾ ಈ ಪ್ರದೇಶದಲ್ಲಿ ತನ್ನ ಚಟುವಟಿಕೆ ಹೆಚ್ಚಿಸಿ ಪ್ರದೇಶದಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.