ಕಠ್ಮಂಡು: ರಾಜಕೀಯ ಅಸ್ಥಿರತೆ ಹಾಗೂ ಮಾವೋಮಾದಿಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಕಾರಣ ಬಹುಮತ ಕಳೆದುಕೊಂಡ ನೇಪಾಳ ಪ್ರಧಾನಿ ಕೆಪಿ ಓಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಓಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು ಒಂದು ವರ್ಷವೂ ಪೂರ್ತಿಯಾಗಿ ಅಧಿಕಾರ ನಡೆಸದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ನೇಪಾಳ ಕಳೆದ 10 ವರ್ಷಗಳಲ್ಲಿ 8 ಸರ್ಕಾರಗಳನ್ನು ಕಂಡಿದ್ದು ಯಾವುದೇ ಸ್ಥಿರ ಸರ್ಕಾರ ರಚಿಸಲು ಯಾವುದೇ ಪಕ್ಷಗಳಿಗೂ ಸಾಧ್ಯವಾಗಿಲ್ಲ.
ಸಂಸತ್ತಿನಲ್ಲಿ ನೇಪಾಳಿ ಕಾಂಗ್ರೆಸ್ ಮತ್ತು ಪ್ರಚಂಡ ನೇತೃತ್ವದ ಸಿಪಿಎನ್ ಮಾವೋವಾದಿ ಪಕ್ಷ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಆಡಳಿತಾರೂಢ ಪಕ್ಷದ ಪ್ರಮುಖ ಅಂಗಪಕ್ಷಗಳಾದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮತ್ತು ಮದೇಶಿ ಪೀಪಲ್ಸ್ ರೈಟ್ಸ್ ಫೋರಂ ಡೆಮಾಕ್ರೆಟಿಕ್ ಪಕ್ಷಗಳು ಬೆಂಬಲ ಸೂಚಿಸಿದ್ದು ಸರ್ಕಾರ ಬಹುಮತ ಕಳೆದುಕೊಳ್ಳಲು ಮೂಲ ಕಾರಣವಾಗಿದೆ.
ಒಳ್ಳೆಯ ಕೆಲಸಗಳನ್ನು ಮಾಡಿದ್ದರು ಸರ್ಕಾರ ಬದಲಾವಣೆಗೆ ಬಯಸುತ್ತಿರುವ ಬೆಳವಣಿಗೆಯ ಕುರಿತು ನನಗೆ ಆಶ್ಚರ್ಯವಾಗುತ್ತಿದೆ. ನಾನು ಅಧಿಕಾರಕ್ಕೆ ಬಂದಾಗ ಭಾರತ ಮತ್ತು ನೇಪಾಳದ ನಡುವಿನ ಸಂಬಂಧ ಸಾಕಷ್ಟು ಹದಗೆಟ್ಟಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಓಲಿ ತಮ್ಮ ವಿದಾಯದ ಭಾಷಣದಲ್ಲಿ ತಿಳಿಸಿದ್ದಾರೆ.