ಫಿಲಡೆಲ್ಫಿಯಾ:ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿಲ್ಲರಿ ಕ್ಲಿಂಟನ್ ಅಮೆರಿಕ ಇತಿಹಾಸದಲ್ಲಿ ಮೊದಲ ಬಾರಿಗೆ ಆಯ್ಕೆಗೊಂಡ ಮಹಿಳಾ ಅಭ್ಯರ್ಥಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಳ್ಳುವುದಕ್ಕೆ ಅಗತ್ಯವಿರುವ 2,382 ಮತಗಳು ಅಗತ್ಯವಿದ್ದು, ಫಿಲಡೆಲ್ಫಿಯಾದಲ್ಲಿ ನಡೆದ ಸಮಾವೇಶದಲ್ಲಿ ಡೆಮಾಕ್ರೆಟ್ಸ್ ನ ಬೆಂಬಲವನ್ನು ಪಡೆಯುವಲ್ಲಿ ಹಿಲರಿ ಕ್ಲಿಂಟನ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಖಚಿತವಾಗಿದೆ.
ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಗೊಂಡಿರುವ ಹಿಲರಿ ಕ್ಲಿಂಟನ್ ಡೆಮಾಕ್ರೆಟ್ಸ್ ಪಕ್ಷದಿಂದ ಬೆಂಬಲ ಸಿಗುತ್ತಿದ್ದಂತೆಯೇ "ಹಿಸ್ಟರಿ"(History) ಎಂದು ಟ್ವೀಟ್ ಮಾಡಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಸಹ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಹಿಲರಿ ಕ್ಲಿಂಟನ್ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಂದರ, ಬುದ್ಧಿವಂತ, ಕಪ್ಪು ವರ್ಣದ ನನ್ನ ಇಬ್ಬರು ಹೆಣ್ಣಮಕ್ಕಳು ಪ್ರೀತಿಯ ನಾಯಿಗಳೊಂದಿಗೆ ಶ್ವೇತಭವನದ ಹುಲ್ಲುಹಾಸಿನಲ್ಲಿ ಆಡುವುದನ್ನು ನೋಡಿದ್ದೇನೆ. ಆದರೆ ಈಗ ಹಿಲರಿ ಅವರಿಂದಾಗಿ ಮಹಿಳೆಯೊಬ್ಬಳು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಾಧ್ಯವಿದೆ ಎಂಬುದನ್ನು ದೇಶದ ಎಲ್ಲ ಮಕ್ಕಳು ಅರಿಯಲು ಸಾಧ್ಯವಾಗಲಿದೆ ಎಂದು ಮಿಶೆಲ್ ಒಬಾಮ ಹಿಲರಿ ಅವರ ಆಯ್ಕೆಯನ್ನು ಅನುಮೋದಿಸಿದ್ದಾರೆ.