ತಾಷ್ಕೆಂಟ್: ಪರಮಾಣು ಪೂರೈಕೆದಾರರ ಸಮೂಹದ(ಎನ್ಎಸ್ಜಿ) ಸದಸ್ಯತ್ವಕ್ಕಾಗಿ ಭಾರತ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಭಾರತ, ‘ಒಂದು ದೇಶ ನಿರಂತರವಾಗಿ ಸದಸ್ಯತ್ವಕ್ಕೆ ಸಂಬಂಧಿಸಿದ ವಿಧಿವಿಧಾನಕ್ಕೆ ಅಡೆತಡೆಗಳನ್ನು ಒಡ್ಡುತ್ತಿದೆ’ಎಂದು ಪರೋಕ್ಷವಾಗಿ ಶುಕ್ರವಾರ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಿಯೋಲ್ ನಲ್ಲಿ ನಡೆದ ಎನ್ ಎಸ್ ಜಿ ಸಭೆ ಭಾರತದ ಅರ್ಜಿಯ ಬಗ್ಗೆ ಯಾವುದೇ ನಿರ್ಣಯವನ್ನೂ ಕೈಗೊಳ್ಳದೆ ಮುಕ್ತಾಯಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಎನ್ಎಸ್ಜಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯಿಂದ ಅಣ್ವಸ್ತ್ರ ಪ್ರಸರಣ ನಿಷೇಧವು ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದರು,
ಸಭೆಯಲ್ಲಿ ಪಾಲ್ಗೊಂಡಿದ್ದ ಬಹುಸಂಖ್ಯಾತ ಸದಸ್ಯರು ಭಾರತದ ಸದಸ್ಯತ್ವವನ್ನು ಬೆಂಬಲಿಸಿದ್ದಾರೆ ಮತ್ತು ಭಾರತದ ಅರ್ಜಿಯ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.
ಭಾರತವನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾವು ಧನ್ಯವಾದ ಸಲ್ಲಿಸುತ್ತೇವೆ. ಈ ವಿಷಯವನ್ನು ಮುಂದಕ್ಕೆ ಒಯ್ಯಲು ವಿಶಾಲ ಭಾವನೆಯ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಸ್ವರೂಪ್ ಹೇಳಿದ್ದಾರೆ.