ವಿದೇಶ

'ಬ್ರೆಕ್ಸಿಟ್' ಚರ್ಚಿಸಲು ಆರು ಐರೋಪ್ಯ ಒಕ್ಕೂಟ ದೇಶಗಳ ಸಭೆ

Guruprasad Narayana

ಬರ್ಲಿನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು ನಿಶ್ಚಯಿಸಿರುವುದರಿಂದ ಒಕ್ಕೂಟದ ಆರು ಸಂಸ್ಥಾಪನಾ ದೇಶಗಳ ವಿತ್ತ ಸಚಿವರು, ಜರ್ಮನಿಯ ಆಹ್ವಾನದ ಮೇರೆಗೆ ಒಕ್ಕೂಟದ ಭವಿಷ್ಯದ ಬಗ್ಗೆ ಮಾತುಕತೆ ನಡೆಸಲು ಸಭೆ ಸೇರಿವೆ.

ಜರ್ಮನಿ, ಪ್ರಾನ್ಸ್, ಇಟಲಿ, ಬೆಲ್ಜಿಯಂ, ನೆದರ್ ಲ್ಯಾನ್ಡ್ಸ್ ಮತ್ತು ಲಕ್ಸಂಬರ್ಗ್ ನ ರಾಯಭಾರಿಗಳು, ಒಕ್ಕೂಟದಿಂದ ಹೊರಬರಲು ಶೇಕಡಾ 52 ಯು ಕೆ ಜನರು ಒಪ್ಪಿರುವ ನಿರ್ಧಾರದ ನಂತರ ಮೊದಲ ಬಾರಿಗೆ ಚರ್ಚೆಗೆ ಮುಂದಾಗಿದ್ದಾರೆ.

ಬ್ರೆಕ್ಸಿಟ್ ನ ಆಘಾತದ ನಂತರ ಒಕ್ಕೂಟದಲ್ಲಿ ಉಳಿದಿರುವ 27 ದೇಶಗಳ ನಿರೀಕ್ಷೆಗಳು, ಸೂಕ್ಷ್ಮ ಅಂಶಗಳು ಮತ್ತು ಗುರಿಗಳನ್ನು ಕಲೆ ಹಾಕಬೇಕಾಗಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಪ್ಹ್ರಾಂಕ್ ವಾಲ್ತರ್ ಸ್ಟೀನ್ ಮೇರ್ ಅವರು ಸಭೆಗೆ ಮುಂಚಿತವಾಗಿ ಹೇಳಿದ್ದಾರೆ.

ಈ ಸಭೆಯಲ್ಲಿ ಒಕ್ಕೂಟದ ಇತರ ರಾಷ್ಟ್ರಗಳಿಗೆ ಆಹ್ವಾನ ನೀಡಿಲ್ಲವೇಕೆ ಎಂಬ ಟೀಕೆಗೆ ಉತ್ತರಿಸಿರುವ ಪ್ಹ್ರಾಂಕ್ ವಾಲ್ತರ್ ಲಕ್ಸಂಬರ್ಗ್ ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಎಲ್ಲ ದೇಶಗಳ ನಿಲುವುಗಳನ್ನು ಹಂಚಿಕೊಳ್ಳಲಾಗಿದೆ ಎಂದಿದ್ದಾರೆ. 'ಬ್ರೆಕ್ಸಿಟ್' ಘೋಷಣೆಗೂ ಮುಂಚಿತವಾಗಿ ನಡೆದ ಸಭೆ ಇದಾಗಿತ್ತು.

ಮುಂದಿನ ದಿನಗಳಲ್ಲಿ ಎಲ್ಲರ ನಿಲುವುಗಳನ್ನು ಪರಿಗಣಿಸಲು ಸಭೆ ನಡೆಸಲಾಗುವುದು ಎಂದು ಕೂಡ ಜರ್ಮನಿಯ ಸಚಿವರು ಹೇಳಿದ್ದಾರೆ.

SCROLL FOR NEXT