ವಿದೇಶ

ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪು ಹಣ ದಾಖಲೆ ಇಳಿಕೆ!

Lingaraj Badiger
ಜ್ಯೂರಿಚ್‌: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಿಸ್‌ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ಯತ್ನಿಸುತ್ತಿರುವ ಬೆನ್ನಲ್ಲೇ, ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಕಪ್ಪು ಹಣ  ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದೀಗ ಕೇವಲ 8,392 ಕೋಟಿ ರುಪಾಯಿ ಅಥವಾ 1.2 ಶತಕೋಟಿ ಫ್ರಾಂಕ್‌ (ಸಿಎಚ್‌ಎಫ್)ಗೆ ಇಳಿಯುವ ಮೂಲಕ ಮೂರನೇ ಒಂದರಷ್ಟು ಕುಗ್ಗಿದೆ.
ಸ್ವಿಸ್ ನಲ್ಲಿರುವ ಭಾರತೀಯ ಕಪ್ಪು ಹಣವನ್ನು ದೇಶಕ್ಕೆ ತರಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಆ ಪ್ರಕಾರ ಸ್ವಿಟ್ಸರ್‌ಲ್ಯಾಂಡ್‌ ತನ್ನ ವಿದೇಶಿ ಗ್ರಾಹಕರ ಕಪ್ಪು ಹಣದ ಮಾಹಿತಿಯನ್ನು ಹಂಚಿಕೊಳ್ಳಲು ಆರಂಭಿಸಿದೆ.
ಇಂದು ಬಿಡುಗಡೆಯಾದ ತಾಜಾ ಅಂಕಿ ಅಂಶಗಳ ಪ್ರಕಾರ, 2015ರ ಅಂತ್ಯಕ್ಕೆ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣದ ಪ್ರಮಾಣ 596.42 ಮಿಲಿಯನ್‌ ಸಿಎಚ್‌ಎಫ್ ನಷ್ಟು ಕಡಿಮೆಯಾಗಿ ಅದು 1,217.60 ಮಿಲಿಯನ್‌ ಸಿಎಚ್‌ಎಫ್ಗೆ ಇಳಿಯಿತು ಎಂದು ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ ಹೇಳಿದೆ.
ಸ್ವಿಸ್‌ ಬ್ಯಾಂಕ್‌ನಲ್ಲಿನ ಹಣದ ಮೂಲವನ್ನು ಬಹಿರಂಗಪಡಿಸುವ ಕ್ರಮ 1997ರಲ್ಲಿ ಆರಂಭವಾದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಕೂಡಿಟ್ಟ ಕನಿಷ್ಠ ಪ್ರಮಾಣದ ಹಣ ಇದಾಗಿದೆ ಮತ್ತು ಇದು ನಿರಂತರ ಎರಡನೇ ವರ್ಷದಲ್ಲಿ ದಾಖಲೆಯ ಕುಗ್ಗುವಿಕೆಯಾಗಿದೆ ಎಂದು ಸ್ವಿಸ್‌ ನ್ಯಾಶನಲ್‌ ಬ್ಯಾಂಕ್‌ ತಿಳಿಸಿದೆ.
2006ರ ಅಂತ್ಯದಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಕೂಡಿಟ್ಟಿದ್ದ ಹಣ 23,000 ಕೋಟಿ ಆಗಿತ್ತು (ಎಂದರೆ ಸಿಎಚ್‌ಎಫ್ 6.5 ಶತಕೋಟಿ).
SCROLL FOR NEXT