ಜಕಾರ್ತಾ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಪಶ್ಚಿಮದಲ್ಲಿ ಬುಧವಾರ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಂಡೋನೇಷ್ಯಾದ ಕರಾವಳಿ ತೀರಕ್ಕೆ ಸುನಾಮಿ ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಡಾಂಗ್ನಿಂದ ಪಶ್ಚಿಮಕ್ಕೆ 800 ಕಿ.ಮೀ. ದೂರದ ಸಮುದ್ರದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆ ಎಂದು ಅಮೆರಿಕದ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಭೂಕಂಪನದಿಂದಾಗಿ ಯಾವುದೇ ಹಾನಿಯಾಗಿಲ್ಲ, ಅಮೆರಿಕ ಭೂಕಂಪ ಅಧ್ಯಯನ ಸಂಸ್ಥೆ ಪ್ರಾರಂಭದಲ್ಲಿ ಭೂಕಂಪನದ ತೀವ್ರತೆ 8.2 ಎಂದು ಹೇಳಿತ್ತು. ಆದರೆ ನಂತರ ಅದು 7.8 ಎಂದು ನಿಖರವಾದ ಮಾಹಿತಿ ನೀಡಿದೆ.
2004ರಲ್ಲಿ ಇಂಡೋನೇಷ್ಯಾದ ಬಳಿ ಸಂಭವಿಸಿದ್ದ ಪ್ರಭಲ ಭೂಕಂಪನದಿಂದ ಸುನಾಮಿ ಅಲೆಗಳು ಎದ್ದು ಇಂಡೋನೇಷ್ಯಾ, ಶ್ರೀಲಂಕಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದರು.