ಒಸಾಮಾ ಬಿನ್ ಲಾಡೆನ್ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಅಲ್‌ಖೈದಾ ನಾಯಕ ಒಸಾಮ ಬಿನ್ ಲಾಡೆನ್ ಜಿಹಾದ್‌ಗಾಗಿ 29 ಮಿಲಿಯನ್ ಡಾಲರ್ ಹಣವನ್ನು ಕೂಡಿಟ್ಟಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
2011ರಲ್ಲಿ ಅಮೆರಿಕದ ವಿಶೇಷ ಪಡೆ ಬಿನ್ ಲಾಡೆನ್ ಅವರ ಮೇಲೆ ದಾಳಿ ಮಾಡಿದಾಗ ಅಲ್ಲಿ ಸಿಕ್ಕಿದ ದಾಖಲೆ ಪತ್ರದಲ್ಲಿ ಈ ವಿಷಯ ಬರೆದಿಡಲಾಗಿತ್ತು ಎಂದು ಅಮೆರಿಕ ಹೇಳಿದೆ.
ಅರೆಬಿಕ್ ಭಾಷೆಯಲ್ಲಿ ಬರೆದಿದ್ದ ದಾಖಲೆ ಪತ್ರದಲ್ಲಿ ತನ್ನ ಮರಣ ನಂತರ ಜಾಗತಿಕ ಮಟ್ಟದಲ್ಲಿ ಜಿಹಾದ್ ನಡೆಸಲು 29 ಮಿಲಿಯನ್ ಡಾಲರ್ ಕೂಡಿಟ್ಟಿರುವ ಬಗ್ಗೆ ಲಾಡೆನ್ ಬರೆದಿಟ್ಟಿದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿದೆ.
ಲಾಡೆನ್ ದಾಳಿ ವೇಳೆ ವಶಪಡಿಸಿಕೊಂಡ 113 ದಾಖಲೆಗಳನ್ನೆಲ್ಲಾ ಒಂದೊಂದಾಗಿ ಪರಿಶೀಲಿಸಿದ್ದು, ಇನ್ನೂ ಹಲವಾರು ದಾಖಲೆಗಳನ್ನು ಅಮೆರಿಕ ಬಿಡುಗಡೆ ಮಾಡಲಿದೆ.
1990ರಲ್ಲಿ ಸೌದಿ ಉಗ್ರರು ಬರೆದಿದ್ದಾರೆ ಎನ್ನಲಾಗುತ್ತಿರುವ ಒಂದು ಹಸ್ತಪ್ರತಿಯಲ್ಲಿ ಸುಡಾನ್‌ನಲ್ಲಿ ಲಾಡೆನ್ ಕೂಡಿಟ್ಟಿರುವ 29 ಮಿಲಿಯನ್ ಡಾಲರ್ ಹಣವನ್ನು ಹೀಗೆ ಹಂಚಬೇಕು ಎಂಬುದನ್ನು ವಿವರಿಸಲಾಗಿದೆ.
29 ಮಿಲಿಯನ್ ಡಾಲರ್‌ನ ಒಂದು ಪ್ರತಿಶತ ಹಣವನ್ನು ಅಲ್‌ಖೈದಾದ ಹಿರಿಯ ಉಗ್ರ ಮಹಫೂಜ್ ಔಲ್ದ್ ಅಲ್ ವಾಲಿದ್ ಗೆ ನೀಡಬೇಕು. ಈಗಾಗಲೇ ಅಲ್ ವಾಲಿದ್ ಇದರಿಂದ 20,000-30,000 ಡಾಲರ್‌ಗಳನ್ನು ಸ್ವೀಕರಿಸಿದ್ದಾನೆ. ಆತ ಸುಡಾನ್ ಸರ್ಕಾರದಿಂದ ಆ ಹಣವನ್ನು ಹೊರತೆಗೆದರೆ ನಾನು ಆತನಿಗೆ ಬಹುಮಾನವನ್ನು ನೀಡುವುದಾಗಿ ಹೇಳಿದ್ದೇನೆ ಎಂದು ಲಾಡೆನ್ ಪತ್ರವೊಂದರಲ್ಲಿ ಬರೆದಿದ್ದಾರೆ.
ಸುಡಾನ್‌ನಲ್ಲಿ ಲಾಡೆನ್ 5 ವರ್ಷಗಳ ಕಾಲ ವಾಸವಾಗಿದ್ದು, ಮೇ 1996ರಲ್ಲಿ ಅಲ್ಲಿಂದ ಸ್ಥಳಾಂತರವಾಗಿದ್ದರು.
ಇನ್ನೊಂದು ಪ್ರತಿಶತ ಹಣವನ್ನು ಇಂಜಿನಿಯರ್ ಅಬು ಇಬ್ರಾಹಿಂ ಅಲ್ ಇರಾಖಿ ಸಾದ್ ಅವರಿಗೆ ನೀಡಬೇಕು. ಅಲ್ ಇರಾಖಿ, ಸುಡಾನ್ ನಲ್ಲಿ ಲಾಡೆನ್‌ನ ಮೊದಲ ಕಂಪೆನಿ ವಾಜಿ ಅಲ್ ಅಖೀಕ್ ಕೋ ಆರಂಭಿಸಲು ಸಹಾಯ ಮಾಡಿದ್ದನು.
ಇನ್ನುಳಿದ ಹಣವನ್ನು ಅಲ್ಲಾಹ್‌ನ ಹೆಸರಲ್ಲಿ ಜಿಹಾದ್‌ಗಾಗಿ ಬಳಸಿಕೊಳ್ಳಿ. ನನ್ನ ಸಹೋದರರು, ಸಹೋದರಿಯರು, ಸಂಬಂಧಿಕರು ನನ್ನ ವಿಲ್ ಪ್ರಕಾರ ಸುಡಾನ್‌ನಲ್ಲಿ ಕೂಡಿಟ್ಟಿರುವ ಈ ಹಣವನ್ನು ಜಿಹಾದ್ ಗಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪತ್ರದಲ್ಲಿ ಲಾಡೆನ್ ಹೇಳಿದ್ದಾರೆ.