ಅಮೆರಿಕ ಬಾಹ್ಯಾಕಾಶ ಯಾತ್ರಿ ಸ್ಕಾಟ್ ಕೆಲ್ಲಿ ಮತ್ತು ರಷ್ಯಾ ಮೂಲದ ಮಿಖಾಯೆಲ್ ಕಾರ್ನಿಕೋ
ವಾಷಿಂಗ್ಟನ್: ಒಂದು ವರ್ಷ ಕಾಲ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಿದ ನಂತರ ಅಮೆರಿಕ ಬಾಹ್ಯಾಕಾಶ ಯಾತ್ರಿ ಸ್ಕಾಟ್ ಕೆಲ್ಲಿ ಮತ್ತು ರಷ್ಯಾ ಮೂಲದ ಮಿಖಾಯೆಲ್ ಕಾರ್ನಿಕೋ ಬುಧವಾರ ಭೂಮಿಗೆ ವಾಪಸ್ ಆಗಿದ್ದಾರೆ. ಒಂದು ವರ್ಷ ಭೂಮಿಯನ್ನು ಸುತ್ತಿದ ಕೆಲ್ಲಿ ಮಂಗಳವಾರ ರಷ್ಯನ್ ಅಂತರಿಕ್ಷ ನೌಕೆ ಸೋಯಜ್ ಎಂಎ 18ರಲ್ಲಿ ಬಂದು ಖಜಾಕಿಸ್ತಾನ್‌ನಲ್ಲಿ ಇಳಿದಿದ್ದಾರೆ. ಈ ಮೂಲಕ ಅತೀ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದ ಬಾಹ್ಯಾಕಾಶ ಯಾತ್ರಿ ಎಂಬ ಬಿರುದಿಗೆ ಇವರಿಬ್ಬರು ಪಾತ್ರರಾಗಿದ್ದಾರೆ.
52 ರ ಹರೆಯದ ಸ್ಕಾಟ್ ಕೆಲ್ಲಿ 340 ದಿನಗಳನ್ನು ಗೆಳೆಯ ರಷ್ಯಾ ಮೂಲದ ಮಿಖಾಯೆಲ್ ಕಾರ್ನಿಕೋ ಜತೆ ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇವರಿಬ್ಬರ ಜತೆ ರಷ್ಯಾ ಮೂಲದ ಸೆರ್ಜಿ ವಾಲ್ಕೋವ್ ಕೂಡಾ ಯಾತ್ರೆ ಕೈಗೊಂಡಿದ್ದರು. ಆದರೆ ವಾಲ್ಕೋವ್ ಅವರಿಗೆ ಅಲ್ಲಿ 182 ದಿನಗಳಷ್ಟು ಕಾಲ ಮಾತ್ರ ತಂಗಲು ಸಾಧ್ಯವಾಯಿತು.
ಅತೀ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದ ರಷ್ಯಾದ 5ನೇ ಗಗನಯಾತ್ರಿಯಾಗಿದ್ದಾರೆ ಕೋರ್ನಿಕೋ. ಬಾಹ್ಯಾಕಾಶದಲ್ಲಿದ್ದರೂ ಇವರಿಬ್ಬರೂ ಸೋಷ್ಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ವಾಪಸ್ ಬರುವುದಿಕ್ಕಿಂತ ಮುನ್ನ ಇವರು ಸೂರ್ಯೋದಯದ ಚಿತ್ರವನ್ನೂ ಶೇರ್ ಮಾಡಿದ್ದರು.
340 ದಿನಗಳಲ್ಲಿ ಕೆಲ್ಲಿ ಮತ್ತು ಕೋರ್ನಿಕೋ ಸೇರಿ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಲ್ಲಿ 143 ಮಿಲಿಯನ್ ಮೈಲು ಸಂಚರಿಸಿದ್ದರು. ಇವರಿಬ್ಬರೂ ಅಲ್ಲಿ ಗ್ಯಾಲಕ್ಸಿ ಬಗ್ಗೆ ಸುಮಾರು 400 ಪರೀಕ್ಷೆಗಳನ್ನು ನಡೆಸಿದ್ದು, 11,000 ಉದಯಾಸ್ತಮಾನಗಳನ್ನು ಕಂಡಿದ್ದರು.