ವಿದೇಶ

ತಾತ್ಕಾಲಿಕ ಉದ್ಯೋಗ ವೀಸಾ ಶುಲ್ಕ ಹೆಚ್ಚಳ: ಅಮೆರಿಕ ವಿರುದ್ಧ ಡಬ್ಲ್ಯುಟಿಒಗೆ ಭಾರತ ದೂರು

Sumana Upadhyaya

ಝುರಿಚ್/ ನವದೆಹಲಿ: ವಲಸಿಗರಲ್ಲದ ತಾತ್ಕಾಲಿಕ ಕೆಲಸದ ವೀಸಾಗಳಿಗೆ ಅಮೆರಿಕ ಮಾಡಿರುವ ಶುಲ್ಕ ಹೆಚ್ಚಳ ಕುರಿತಂತೆ ಕೇಂದ್ರ ಸರ್ಕಾರ ವಿಶ್ವ ವ್ಯಾಪಾರ ಸಂಘಟನೆಗೆ ದೂರು ನೀಡಿರುವುದರಿಂದ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಬಿಕ್ಕಟ್ಟು ತೀವ್ರಗೊಂಡಿದೆ.
ಅಮೆರಿಕ, ಹೆಚ್-1ಬಿ ಮತ್ತು ಎಲ್-1 ವೀಸಾಗಳ ಶುಲ್ಕವನ್ನು ದುಪ್ಪಟ್ಟು ಮಾಡಿರುವುದಕ್ಕೆ ಭಾರತ ದೂರು ನೀಡಿದೆ ಎಂದು ವಿಶ್ವ ವ್ಯಾಪಾರ ಸಂಘಟನೆ ಹೇಳಿದೆ.

ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಐಟಿ ಸೇವಾ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯರು ಈ ತಾತ್ಕಾಲಿಕ ವೀಸಾವನ್ನು ಅವಲಂಬಿಸಿಕೊಂಡಿದ್ದಾರೆ.

ಸೋಲಾರ್ ಪವರ್ ಸಬ್ಸಿಡಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ  ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಅಮೆರಿಕ ಪರವಾಗಿ ತೀರ್ಪು ಬಂದ ಕೆಲ ದಿನಗಳಲ್ಲೇ ಈ ದೂರು ಬಂದಿದೆ. ಭಾರತ ತನ್ನ ದೂರಿನಲ್ಲಿ, ಅಮೆರಿಕ ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ ಮಾಡಿಕೊಂಡ ಬದ್ಧತೆ ಪ್ರಕಾರ ಹೊಸ ವೀಸಾ ಕಾನೂನು ಅಸಮಂಜಸವಾಗಿದೆ. ಭಾರತೀಯ ಐಟಿ ನೌಕರರನ್ನು ಅಮೆರಿಕದ ಐಟಿ ಉದ್ಯೋಗಿಗಳಿಗಿಂತ ಕೀಳಾಗಿ ಕಾಣಲಾಗುತ್ತದೆ ಎಂದು ಹೇಳಿದೆ.

ಕಳೆದ ಡಿಸೆಂಬರ್ ನಲ್ಲಿ ಅಮೆರಿಕ ಸರ್ಕಾರ ಹೆಚ್ 1-ಬಿ ವೀಸಾ ಶುಲ್ಕವನ್ನು ಪ್ರತಿ ವೀಸಾಕ್ಕೆ 4 ಸಾವಿರ ಡಾಲರ್, ಎಲ್ -1 ವೀಸಾಕ್ಕೆ 4, 500 ಡಾಲರ್ ಗೆ ಏರಿಕೆ ಮಾಡಿತ್ತು. ತನ್ನ ಸಲಹೆಯನ್ನು ಕೇಳದೆ ಶುಲ್ಕವನ್ನು ಹೆಚ್ಚಿಸಿದೆ ಎಂಬುದು ಭಾರತದ ಆರೋಪವಾಗಿದೆ.
ಆದರೆ ಈ ದೂರಿನ ಬಗ್ಗೆ ಭಾರತೀಯ ವ್ಯಾಪಾರ ಸಚಿವಾಲಯದ ವಕ್ತಾರರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಅಮೆರಿಕ ವ್ಯಾಪಾರ ಪ್ರಾತಿನಿಧಿತ್ವ ವಕ್ತಾರ ಆಂಡ್ರ್ಯೂ ಬೇಟ್ಸ್, ಈ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ. ತಾತ್ಕಾಲಿಕ ವೀಸಾ ಶುಲ್ಕ ಹೆಚ್ಚಳ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.

ಭಾರತದ ದೂರಿನ ಕುರಿತು ಅಮೆರಿಕಕ್ಕೆ ಪ್ರತಿಕ್ರಿಯೆ ನೀಡಲು ವಿಶ್ವ ವ್ಯಾಪಾರ ಸಂಘಟನೆ 10 ದಿನಗಳ ಕಾಲಾವಕಾಶ ನೀಡಿದೆ. ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಬಾರದಿದ್ದರೆ ಅದು ವಿವಾದ ಬಗೆಹರಿಸುವ ಸಂಸ್ಥೆಗೆ ಹೋಗುತ್ತದೆ.

SCROLL FOR NEXT