ವಾಷಿಂಗ್ ಟನ್: ಅಣು ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.
ಭೆಟಿಯ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಸಾಧ್ಯತೆಗಳಿವೆ ಎಂದಷ್ಟೇ ಹೇಳಬಹುದು ಎಂದು ಸರ್ತಾಜ್ ಅಜೀಜ್ ತಿಳಿಸಿದ್ದಾರೆ. ಈ ತಿಂಗಳು ನಡೆಯಲಿರುವ ಅಣು ಭದ್ರತಾ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಹ್ವಾನದ ಮೇರೆಗೆ ನವಾಜ್ ಷರೀಫ್ ಅಮೆರಿಕಾಗೆ ಭೇಟಿ ನೀಡಲಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪಾಕ್ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್, ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವರ್ಷದ ಪ್ರಾರಂಭದಲ್ಲಿ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿರಲಿಲ್ಲ. ಆದರೆ ಕಳೆದ 2 ತಿಂಗಳಿನಿಂದ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಮೋದಿ- ಷರೀಫ್ ಸಂಭಾವ್ಯ ಭೇಟಿಗೂ ಮುನ್ನ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲಿದೆ ಎಂದು ಸರ್ತಾಜ್ ಅಜೀಜ್ ಹೇಳಿದ್ದಾರೆ.