ಢಾಕಾ: ಇಂಟರ್‌ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ಸೋರಿಕೆ ಮಾಡಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ವಿದೇಶೀ ಅಕೌಂಟ್ ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್ (ರು. 5448501450.00) ದರೋಡೆ ಮಾಡಲಾಗಿದೆ. ಬಾಂಗ್ಲಾದೇಶವನ್ನೇ ಮುಜುಗರಕ್ಕೀಡು ಮಾಡಿದ ಸೈಬರ್ ದರೋಡೆ ಇದಾಗಿದ್ದು, ಬ್ಯಾಂಕ್ ಗವರ್ನರ್ ಅತೀವುರ್ ರೆಹಮಾನ್ (64) ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಜಗತ್ತಿನಲ್ಲಿ ನಡೆದ ಅತೀ ದೊಡ್ಡ ದರೋಡೆಯಾಗಿದೆ ಇದು. ಆದಾಗ್ಯೂ, ಒಂದು ದೇಶದಲ್ಲಿ ಸೆಂಟ್ರಲ್ ಬ್ಯಾಂಕ್‌ನ ದರೋಡೆಯಾಗಿದ್ದು ಇದೇ ಮೊದಲ ಬಾರಿಯಾಗಿದೆ.
ಬಾಂಗ್ಲಾದೇಶ್ ಬ್ಯಾಂಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಅಕೌಂಟಿನಿಂದ ಫೆಬ್ರವರಿ ಮೊದಲ ವಾರದಲ್ಲಿ ಆಗಂತುಕರು ಕೋಟಿಗಳಷ್ಟು ದುಡ್ಡು ದರೋಡೆ ಮಾಡಿದ್ದರು. ದರೋಡೆ ಮಾಡಿದ ದುಡ್ಡಿನಿಂದ 8.1 ಕೋಟಿ ಡಾಲರ್ ಫಿಲಿಫೇನ್ಸ್‌ನ ಅಕೌಂಟಿಗೂ ಬಾಕಿ ದುಡ್ಡನ್ನು ಶ್ರೀಲಂಕಾದ ಅಕೌಂಟ್‌ಗೂ ರವಾನಿಸಲಾಗಿದೆ. ಈ ಘಟನೆ ನಡೆದು ವಾರಗಳಾಗಿದ್ದರೂ ಬಾಂಗ್ಲಾದೇಶದ ವಿತ್ತ ಸಚಿವರಿಗೆ ಈ ವಿಷಯ ಗೊತ್ತಾಗಲೇ ಇಲ್ಲ. ಪತ್ರಿಕೆಗಳಲ್ಲಿನ ವರದಿ ನೋಡಿ ತಾನು ಗವರ್ನರ್‌ಗೆ ಹೇಳಿರುವುದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿತ್ತ ಸಚಿವ ಎಎಂಎ ಮುಹೀತ್ ಹೇಳಿದ್ದಾರೆ. ಇದೀಗ ವಿತ್ತ ಸಚಿವಾಲಯದ ಮಾಜಿ ಕಾರ್ಯದರ್ಶಿ ಫಸ್ಲ್ ಕಬೀರ್ ಅವರನ್ನು ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ಒಂದು ಅಕೌಂಟ್‌ನಿಂದ ಮತ್ತೊಂದು ಅಕೌಂಟ್‌ಗೆ ಹಣ ವರ್ಗಾವಣೆ ಮಾಡುವ ಇಂಟರ್‌ನೆಟ್ ಬ್ಯಾಂಕಿಂಗ್‌ಗಾಗಿ ಬಳಸಲ್ಪಡುವ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿ ಈ ದರೋಡೆ ಮಾಡಲಾಗಿದೆ.
ವಾರಾಂತ್ಯ ರಜೆ ಕೂಡಾ ದರೋಡೆಗೆ ಸಹಾಯವಾಯಿತು
ಫೆಬ್ರವರಿ 4 ಮತ್ತು 5 ರಂದು ಸೈಬರ್ ದರೋಡೆ ನಡೆದಿತ್ತು. ಫೆಬ್ರವರಿ 5 ಶುಕ್ರವಾರ ಬಾಂಗ್ಲಾದೇಶದಲ್ಲಿ ಬ್ಯಾಂಕ್ ರಜೆ. ಶನಿವಾರ ಮತ್ತು ಭಾನುವಾರ ನ್ಯೂಯಾರ್ಕ್ ರಿಸರ್ವ್ ಬ್ಯಾಂಕ್‌ಗೂ ರಜೆಯಾಗಿದೆ. ಫಿಲಿಫೇನ್ಸ್‌ನಲ್ಲಿ ಚೈನೀಸ್ ಹೊಸ ವರುಷದ ಕಾರಣ ಸೋಮವಾರ ಬ್ಯಾಂಕ್‌ಗೆ ರಜೆಯಾಗಿತ್ತು. ಹೀಗೆ ಒಂದರ ಹಿಂದೆ ಒಂದು ಎಂಬಂತೆ ಸಿಕ್ಕಿದ ರಜೆಗಳು ದರೋಡೆಕೋರರಿಗೆ ವರದಾನವೂ ಆಯಿತು.