ವಿದೇಶ

ಉಗ್ರನ ಐಫೋನ್ ಹ್ಯಾಕ್ ಯಶಸ್ವಿ: ಆಪಲ್ ವಿರುದ್ಧದ ಕಾನೂನು ಕ್ರಮ ವಾಪಸ್

Srinivas Rao BV

ವಾಷಿಂಗ್ ಟನ್: ಉಗ್ರನ ಎನ್‍ಕ್ರಿಪ್ಟ್ ಆಗಿದ್ದ ಆಪಲ್ ಐಫೋನ್ ನನ್ನು ಯಶಸ್ವಿಯಾಗಿ ಹ್ಯಾಕ್ ಮಾಡಿದ ನಂತರ ಅಮೆರಿಕದ ನ್ಯಾಯಾಂಗ ಇಲಾಖೆ ಆಪಲ್ ವಿರುದ್ಧದ ಕಾನೂನು ಕ್ರಮವನ್ನು ಹಿಂಪಡೆಯಲು ನಿರ್ಧರಿಸಿದೆ.
ಡಿಸೆಂಬರ್​ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಂಡಿನೋದಲ್ಲಿ ದಾಳಿ ನಡೆಸಿ 14 ಜನರ ಸಾವಿಗೆ ಕಾರಣರಾಗಿದ್ದ ಉಗ್ರರ ಮೊಬೈಲ್​ನಲ್ಲಿರುವ ರಹಸ್ಯ ಡೇಟಾಗಳನ್ನು ನೀಡಲು ಆಪಲ್ ನಿರಾಕರಿಸಿತ್ತು. ಅಂತಿಮವಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ ಬಿಐ) ಉಗ್ರನ ಮೊಬೈಲ್ ನಲ್ಲಿದ್ದ ಡೇಟಾವನ್ನು ಸುರಕ್ಷಿತವಾಗಿಟ್ಟು ಫೋನನ್ನು ಹ್ಯಾಕ್ ಮಾಡಿದೆ.
ಮಾಧ್ಯಮಗಳ ವರದಿ ಪ್ರಕಾರ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ ಬಿಐ) ಗೆ 'ಮೂರನೇ ವ್ಯಕ್ತಿ'ಯ ಸಹಾಯ ದೊರೆತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಪಲ್ ಸಂಸ್ಥೆ, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದು ಸಂಸ್ಥೆಯ ಉತ್ಪನ್ನಗಳ ಭದ್ರತೆಯನ್ನೂ ಹೆಚ್ಚಿಸುವುದಾಗಿ ಭರವಸೆ ನೀಡಿದೆ.
ಐಫೋನ್ ನ ಅನ್ ಲಾಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಯುಎಸ್ ಸರ್ಕಾರ ಹಾಗೂ ಆಪಲ್ ನಡುವೆ ನಡೆಯುತ್ತಿದ್ದ ಕಾನೂನು ಸಮರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಪಲ್ ಸಿಇಒ, ಟಿಮ್ ಕುಕ್, ಗ್ರಾಹಕರ ಡೇಟಾ ಹಾಗೂ  ಗೌಪ್ಯತೆಯನ್ನು ರಕ್ಷಿಸುವುದಾಗಿ ಪುನರುಚ್ಚರಿಸಿದ್ದಾರೆ.
ಕಳೆದ ಡಿಸೆಂಬರ್​ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಂಡಿನೋದಲ್ಲಿ ದಾಳಿ ನಡೆಸಿ 14 ಜನರ ಸಾವಿಗೆ ಕಾರಣರಾಗಿದ್ದ ಉಗ್ರರ ಮೊಬೈಲ್​ನಲ್ಲಿರುವ ರಹಸ್ಯ ಡೇಟಾಗಳನ್ನು ನೀಡಲು ಆಪಲ್ ನಿರಾಕರಿಸಿದೆ. ಈ ಸಂಬಂಧ ಫೆಡರಲ್ ಕೋರ್ಟ್ ಮೊರೆ ಹೋಗಿತ್ತು. ಎಫ್​ಬಿಐ ತನಿಖೆಗೆ ನೆರವು ನೀಡುವ ಉದ್ದೇಶದಿಂದ ಉಗ್ರ ಸೈಯ್ಯದ್ ಫರೂಕ್ ಮತ್ತಾತನ ಪತ್ನಿಯ ಮೊಬೈಲ್​ನಲ್ಲಿರುವ ರಹಸ್ಯ ಮಾಹಿತಿಗಳನ್ನು ನೀಡುವಂತೆ ಕೋರಲಾಗಿತ್ತು. ಆದರೆ ಇದಕ್ಕೆ ಆಪಲ್ ನಿರಾಕರಿಸಿದ್ದ ಸಿಇಒ ಟಿಮ್ ಕುಕ್, ಇದರಿಂದ ಕಂಪನಿ ಮತ್ತು ಗ್ರಾಹಕರ ನಡುವೆ ಇರುವ ಸಂಬಂಧ ಹಾಳಾಗಲಿದೆ ಎಂದು  ಹೇಳಿದ್ದರು.

SCROLL FOR NEXT