ವಾಷಿಂಗ್ಟನ್: 2012 ಡಿಸೆಂಬರ್ ನಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಭಾರತದಲ್ಲಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿದ್ದರೂ, ಲೈಂಗಿಕ ಕಿರುಕುಳ ಸಮಸ್ಯೆ ವ್ಯಾಪಕವಾಗಿಯೇ ಹರಡಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.
ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಈ ವಿಚಾರ ತಿಳಿದು ಬಂದಿದೆ. ಭಾರತದಲ್ಲಿ ಕಾನೂನನ್ನು ಎಷ್ಟೇ ಬಿಗಿಗೊಳಿಸಿದ್ದರೂ, ಮಹಿಳೆಯರ ಮೇಲಿನ ಲೈಂಗಿಕ ಕಿರುಕಳ ಮಾತ್ರ ವ್ಯಾಪಕವಾಗಿ ಹರಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ದೆಹಲಿಯಲ್ಲಿ ಸಾರ್ವಜನಿಕವಾಗಿ ಶೇ.40 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಬಸ್, ಪಾರ್ಕ್, ಬಸ್ ನಿಲ್ದಾಣಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಅದು ಹೆಚ್ಚಾಗಿ ಹಗಲಿನಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಇನ್ನು ಶೇ.58 ರಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಒಂದು ಬಾರಿಯಾದರು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಶೇ.33 ಮಹಿಳೆಯರು ಸಾರ್ವಜನಿಕ ಸ್ಥಳಕ್ಕೆ ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು, ಶೇ.17 ಮಹಿಳಾ ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ ವರದಿ ಹೇಳಿದೆ.
ಭಾರತದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಹೆಚ್ಚು ಸುರಕ್ಷಿತವಿರುವುದಿಲ್ಲ. ಹಾಗಾಗಿ, ಇಂತಹ ಸ್ಥಳಗಳಿಗೆ ಮಹಿಳೆಯರು ಭೇಟಿ ನೀಡುವುದನ್ನು ನಿಲ್ಲಿಸುತ್ತಿದ್ದಾರೆ ಎಂದು ಸಂಶೋಧಕ ಮಹೇಶ್ ನಲ್ಲಾ ಹೇಳಿದ್ದಾರೆ.