ಫೋರ್ಟ್ ಮೆಕ್‌ಮುರ್ರೆ: ಕೆನಡಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾಡ್ಗಿಚ್ಚಿನ ರೌದ್ರತೆಗೆ ಸುಮಾರು ಎರಡು ಲಕ್ಷ ಹೆಕ್ಟೇರ್‌ಗೂ ಅಧಿಕ ಅರಣ್ಯ ಪ್ರದೇಶ ಭಸ್ಮವಾಗಿದೆ.
ಕಾಡ್ಗಿಚ್ಚಿನ ಬೆಂಕಿಯ ಕೆನ್ನಾಲಿಗಿಗೆ ಸಾವಿರಾರು ವನ್ಯಜೀವಿಗಳು, ಅಮೂಲ್ಯ ಗಿಡಮರಗಳು ಮತ್ತು ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಶನಿವಾರ ರಾತ್ರಿಯಿಂದ ಕಾಡ್ಗಿಚ್ಚು ತೀವ್ರ ಸ್ವರೂಪ ಪಡೆದಿದ್ದು, ಅರಣ್ಯ ಪ್ರದೇಶ ಸೇರಿದಂತೆ ಸಮೀಪದ ಪ್ರದೇಶಗಳಿಗೂ ಬೆಂಕಿ ವ್ಯಾಪಿಸುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸಮರೋಪಾದಿಯಲ್ಲಿ ಕಾಡ್ಗಿಚ್ಚನ್ನು ನಂದಿಸುವ ಕಾರ್ಯ ನಡೆಯುತ್ತಿದ್ದು, ಕೆನಡಾದ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಹಗಲಿರುಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ವಿಶೇಷ ವಿಮಾನಗಳು, ಏರ್ ಟ್ಯಾಂಕರ್‌ಗಳಿಂದ ಅರಣ್ಯ ಪ್ರದೇಶದ ಮೇಲೆ ನೀರು ಸುರಿಯಲಾಗುತ್ತಿದ್ದು, ಬೆಂಕಿ ನಿಯಂತ್ರಣಕ್ಕೆ ಸಕಲ ಪ್ರಯತ್ನ ನಡೆಸಲಾಗುತ್ತಿದ್ದರೂ ಕಾಡ್ಗಿಚ್ಚು ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕಾಡ್ಗಿಚ್ಚಿನ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳ ಸುಮಾರು 25 ಸಾವಿರಕ್ಕೂ ಅಧಿಕ ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಕೆಲವೆಡೆ ಬೆಂಕಿ ತಾಪಕ್ಕೆ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಕಾಳ್ಗಿಚ್ಚಿನಿಂದಾಗಿ ಸುತ್ತಮುತ್ತಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಕಾಡ್ಗಿಚ್ಚು ಪೀಡಿತ ಪ್ರದೇಶ ಸುತ್ತಮುತ್ತಲಿನ 25,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ
ತೈಲ ಸಂಗ್ರಹಾಗಾರಕ್ಕೆ ಆತಂಕ
ಕಾಡ್ಗಿಚ್ಚು ವ್ಯಾಪಿಸಿರುವ ಫೋರ್ಟ್ ಮೆಕ್‌ಮುರ್ರೆ ಪ್ರದೇಶದ ಸಮೀಪದಲ್ಲಿಯೇ ತೈಲ ಸಂಗ್ರಹಾಗಾರವಿದ್ದು, ಕಾಡ್ಗಿಚ್ಚನ್ನು ನಿಯಂತ್ರಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ. ತೈಲ ಸಂಗ್ರಹಾಗಾರದ ಸಿಬ್ಬಂದಿಯನ್ನು ಈಗಾಗಲೇ ತೆರವುಗೊಳಿಸಲಾಗಿದ್ದು, ಲಂಡನ್ ನಗರಕ್ಕಿಂತಲೂ ಹೆಚ್ಚಿನ ಪ್ರದೇಶಕ್ಕೆ ಕಾಳ್ಗಿಚ್ಚು ವ್ಯಾಪಿಸಿದೆ. ಅಪಾಯ ಸ್ಥಿತಿ ಎದುರಿಸುತ್ತಿರುವ ಅಲ್ಬರ್ಟಾ ಪಟ್ಟಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಮಳೆ ಬಾರದ ಹೊರತು ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಗೋಚರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.