ವಿದೇಶ

ಸರ್ಕಾರಿ ಸಂಸ್ಥೆಗಳೇ ಜೆಯುಡಿ, ಜೆಇಎಂ ಉಗ್ರ ಸಂಘಟನೆಗಳೊಂದಿಗೆ ಶಾಮೀಲಾಗಿವೆ: ಪಾಕ್ ಸಚಿವ

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಇರುವ ಉಗ್ರರನ್ನು ಉತ್ತೇಜಿಸುತ್ತಿರುವ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಹ ಬೆಳವಣಿಗೆ ನಡೆದಿದ್ದು ಸ್ವತಃ ಪಾಕಿಸ್ತಾನದ ಪಂಜಾಬ್ ಸಚಿವ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಾಕಿಸ್ತಾನದ ಸರ್ಕಾರಿ ಸಂಸ್ಥೆಗಳು ನಂಟು ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ.

ಬಿಬಿಸಿ ಉರ್ದು ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿರುವ ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನಾವುಲ್ಲಾ, ಪಾಕಿಸ್ತಾನದ ಸರ್ಕಾರಿ ಸಂಸ್ಥೆಗಳೇ ಜಮಾತ್-ಉದ್-ದವಾ, ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗಳೊಂದಿಗೆ ಶಾಮೀಲಾಗಿವೆ ಎಂದು ಹೇಳಿಕೆ ನೀಡಿದ್ದಾರೆ.

ಜೆಯುಡಿ, ಜೆಇಎಂ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಣಾ ಸನಾವುಲ್ಲಾ, ಜೆಯುಡಿ, ಜೆಇಎಂ ಉಗ್ರ ಸಂಘಟನೆಗಳನ್ನು ನಿಷೇಧಿತ ಉಗ್ರ ಸಂಘಟನೆಗಳೆಂದು ಘೋಶಿಸಲಾಗಿದೆ ಹಾಗೂ ಈ ಸಂಘಟನೆಗಳು ಪಂಜಾಬ್ ಪ್ರಾಂತ್ಯದಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿರುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಉಗ್ರ ಸಂಘಟನೆಗಳೊಂದಿಗೆ ಸರ್ಕಾರಿ ಸಂಸ್ಥೆಗಳೇ ಶಾಮಿಲಾಗಿರುವಾಗ ಹೇಗೆ ತಾನೇ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯ ಎಂದು ರಾಣಾ ಸನಾವುಲ್ಲಾ ಪ್ರಶ್ನಿಸಿದ್ದಾರೆ.

ಭಾರತದ ಮೇಲೆ ಪರೋಕ್ಷ ಯುದ್ಧ ನಡೆಸಲು ಪಾಕಿಸ್ತಾನ ಜೆಯುಡಿ, ಜೆಇಎಂ ನಂತಹ ಉಗ್ರ ಸಂಘಟನೆಗಳನ್ನು ಪೋಷಿಸುತ್ತಿದೆ ಎಂದು ಭಾರತ ಸರ್ಕಾರ ಹಲವು ಬಾರಿ ಆರೋಪಿಸಿದೆ. ಆದರೆ ಭಾರತ ಸರ್ಕಾರದ ಆರೋಪವನ್ನು ತಳ್ಳಿಹಾಕಿರುವ ಪಾಕಿಸ್ತಾನ ಈ ಎರಡೂ ಉಗ್ರ ಸಂಘಟನೆಗಳಿಗೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಹಾಗೂ ಆ ಉಗ್ರ ಸಂಘಟನೆಗಳ ಮೇಲೆ ತನಗೆ ನಿಯಂತ್ರಣ ಇಲ್ಲ ಎಂದು ತಿಳಿಸಿದೆ.

SCROLL FOR NEXT