ವಾಷಿಂಗ್ಟನ್: ಅಮೆರಿಕ ಮಿತ್ರ ಪಡೆ ನಡೆಸಿದ ವಾಯುದಾಳಿಯಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ಹತನಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದಲ್ಲಿ ಪ್ರಮುಖ ಸಾಧನೆ ಮಾಡಿದ್ದು, ತಾಲಿಬಾನ್ ಮುಖಂಡ ಮುಲ್ಲಾ ಮನ್ಸೂರ್ ನನ್ನು ಹತ್ಯೆಗೈಯ್ಯಲಾಗಿದೆ. ಶನಿವಾರ ಪಾಕಿಸ್ತಾನ-ಆಫ್ಘನ್ ಗಡಿಯಲ್ಲಿ ತನ್ನ ಹಿಂಬಾಲಕರೊಂದಿಗೆ ತೆರಳುತ್ತಿದ್ದ ಮುಲ್ಲಾ ಮನ್ಸೂರ್ ನನ್ನು ಅಮೆರಿಕ ಮಿತ್ರಪಡೆಯ ಡ್ರೋನ್ ವಿಮಾನ ಪತ್ತೆ ಮಾಡಿತ್ತು. ವಾಹನದಲ್ಲಿ ಇರುವುದು ಮುಲ್ಲಾ ಮನ್ಸೂರ್ ಎಂದು ತಿಳಿಯುತ್ತಿದ್ದಂತೆಯೇ ಕ್ಷಿಪಣಿ ದಾಳಿ ನಡೆಸಿ ಆತನನ್ನು ಕೊಲ್ಲಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದಾರೆ.
ಶನಿವಾರ ಆಫ್ಘಾನಿಸ್ತಾನದ ಅಹ್ಮದ್ ವಾಲ್ ನಗರದಲ್ಲಿ ಅಮೆರಿಕ ಸೇನಾಪಡೆಗಳು ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿ, ವಾಹನದಲ್ಲಿ ತೆರಳುತ್ತಿದ್ದ ಉಗ್ರ ಮನ್ಸೂರ್ ಹಾಗೂ ಆತನ ಸಹಚರರನ್ನು ಕೊಂದು ಹಾಕಲಾಗಿತ್ತು ಎಂದು ವರದಿ ಬಂದಿತ್ತು. ಆದರೆ ಈ ವರದಿಯನ್ನು ಪಾಕ್ ಮಾಧ್ಯಮಗಳು ಅಲ್ಲಗಳೆದಿದ್ದವು. ಇದೀಗ ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ್ ಅವರು ಸ್ಪಷ್ಟಪಡಿಸಿದ್ದಾರೆ.