ವಾಷಿಂಗ್ಟನ್: ಕಳೆದ ಡಿಸೆಂಬರ್ ನಲ್ಲಿ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕಾದ ಹೆಚ್-1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಹೆಚ್ಚುವರಿ 4 ಸಾವಿರ ಡಾಲರ್ ನೀಡಬೇಕಾಗುವುದು ಎಂದು ಅಮೆರಿಕಾದ ಫೆಡರಲ್ ಏಜೆನ್ಸಿ ತಿಳಿಸಿದೆ.
ಎಲ್-1 ವೀಸಾಕ್ಕೆ ಅರ್ಜಿ ಸಲ್ಲಿಸುವ ಭಾರತೀಯ ಕಂಪೆನಿಗಳು ಅಮೆರಿಕಾದ ಕಂಪನಿಗಳು ಕಟ್ಟುವ ಮೊತ್ತಕ್ಕಿಂತ ನಾಲ್ಕೂವರೆ ಸಾವಿರ ಡಾಲರ್ ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಈ ನಿಯಮ 2025ನೇ ಇಸವಿ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ.
ಹೆಚ್-1ಬಿ ವೀಸಾದಡಿ, ಅಮೆರಿಕದ ಉದ್ಯಮಿಗಳು ಅಥವಾ ಕಂಪನಿ ಮಾಲೀಕರು ವಿದೇಶಗಳ ಉದ್ಯೋಗಸ್ಥರನ್ನು ನೇಮಕ ಮಾಡಿಕೊಳ್ಳುವುದಾಗಿದೆ. ಎಲ್-1 ವೀಸಾ ಅಂತಾರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗಾಗಿದ್ದು, ಕಚೇರಿಯು ಅಮೆರಿಕಾ ಮತ್ತು ವಿದೇಶಗಳಲ್ಲಿಯೂ ಇರುತ್ತದೆ.
ಅಮೆರಿಕಾದ ಈ ನಿಯಮದಿಂದಾಗಿ ಭಾರತೀಯ ಐಟಿ ಕಂಪೆನಿಗಳಿಗೆ ವಾರ್ಷಿಕವಾಗಿ 400 ದಶಲಕ್ಷ ಡಾಲರ್ ಹೆಚ್ಚುವರಿ ಹೊರೆ ಬೀಳಲಿದ್ದು, ಇದನ್ನು ತಾರತಮ್ಯ ನೀತಿ ಎಂದು ಭಾರತದ ಐಟಿ ಕಂಪನಿಗಳು ಹೇಳಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಿದ್ದರು.
ಅಮೇರಿಕಾದ ಸಂಯುಕ್ತ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೆಚ್ಚುವರಿ ಶುಲ್ಕ ಕುರಿತು ತನ್ನ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದೆ. ಹೆಚ್ಚುವರಿ ಶುಲ್ಕವನ್ನು ಪ್ರತ್ಯೇಕ ಚೆಕ್ ನಲ್ಲಿ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ ಕಟ್ಟಬೇಕು.