ಕಾಬೂಲ್: ಅಮೆರಿಕ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದ ತಾಲಿಬಾನ್ ಉಗ್ರ ಸಂಘಟನೆ ಮುಖ್ಯಸ್ಥ ಮುಲ್ಲಾ ಮನ್ಸೂರ್ ಗೆ ಪಾಕಿಸ್ತಾನದ ಐಎಸ್ ಐ ರಕ್ಷಣೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಮನ್ಸೂರ್ ನ ಮಾಜಿ ಸಹದ್ಯೋಗಿಯ ಹೇಳಿಕೆಯ ಪ್ರಕಾರ ಮುಲ್ಲಾ ಮನ್ಸೂರ್ ಗೆ ದುಬೈ, ಯುಎಇ, ಪಾಕಿಸ್ತಾನದಲ್ಲಿ ಮನೆಯಿದೆ. ಎರಡು ಮನೆಗಳಿಗೆ ಆಗಾಗ ಭೇಟಿ ನೀಡುತ್ತಿದ್ದನು. ಪಾಕಿಸ್ತಾನದ ಕ್ವೆಟ್ಟಾದಲ್ಲಿದ್ದ ಆತನ ಮನೆಗೆ ಐಎಸ್ಐ ರಕ್ಷಣೆ ಕೊಡಲಾಗಿತ್ತು ಎಂದು ತಿಳಿದು ಬಂದಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಮನ್ಸೂರ್ ನನ್ನು ಪಾಕಿಸ್ತಾನದ ಆಲ್ ಖೈದ ನಾಯಕ ಓಸಾಮಾ ಬಿನ್ ಲಾಡೆನ್ ಹತ್ಯೆ ಮಾಡಿದ ರೀತಿಯಲ್ಲೇ ಹತ್ಯೆ ಮಾಡಲಾಗಿದೆ. 2011 ಮೇ 2ರಂದು ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಲಾಗಿತ್ತು. ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಒಮರ್ ನನ್ನು 2013 ಏಪ್ರಿಲ್ 23ರಂದು ಕ್ವೆಟ್ಟಾದಲ್ಲಿ ಹತ್ಯೆ ಮಾಡಲಾಗಿತ್ತು. ಇನ್ನು ಮತ್ತೊಬ್ಬ ಅಲ್ ಖೈದ ನಾಯಕ ಖಾಲಿದ್ ಶೀಕ್ ಮೊಹಮ್ಮದ್ 2003 ಮಾರ್ಚ್ 1 ರಂದು ರಾವಲ್ ಪಿಂಡಿಯಲ್ಲಿ ಬಂಧಿಸಲಾಗಿತ್ತು.
ಮನ್ಸೂರ್ ತಾನು ಹತ್ಯೆಯಾಗುವ ಮುನ್ನ ಪಾಕಿಸ್ತಾನ ಹೊರತು ಪಡಿಸಿ ಇತರೆಡೆ ನಿರಂತರವಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ಆಫ್ಘಾನ್ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಜಿಯೋ ಟಿವಿ ವರದಿ ಪ್ರಕಾರ, ಮನ್ಸೂರ್ ಕರಾಚಿಯ ಜಿನ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ 9 ಬಾರಿ ಪ್ರಯಾಣ ಬೆಳಸಿದ್ದು, ಬಹ್ರೈನ್ ಗೆ ಒಂದು ಬಾರಿ ಭೇಟಿ ನೀಡಿದ್ದಾರೆ ಎಂದು ಹೇಳಿದೆ.
ಆದರೆ ಪಾಕಿಸ್ತಾನ ಸುದ್ದಿ ಚಾನೆಲ್ ಗಳು ಮಾತ್ರ, 2006 ಮಾರ್ಚ್ 12ರಂದು ದುಬೈನಿಂದ ವಿಮಾನದಲ್ಲಿ ಮುಲ್ಲಾ ಮನ್ಸೂರ್ ಕರಾಚಿಗೆ ಆಗಮಿಸಿದ್ದರು. ಅದೇ ವರ್ಷ ಆಗಸ್ಟ್ 23ರಂದು ದುಬೈಗೆ ಮರಳಿದರು. ಮತ್ತೆ 2006 ಅಕ್ಟೋಬರ್ 4ರಂದು ವಾಪಸ್ಸಾದರು. 2007ರಲ್ಲಿ ಒಂದು ಬಾರಿ, 2008ರಲ್ಲಿ ಎರಡು ಬಾರಿ, 2009ರಲ್ಲಿ ಒಂದು ಬಾರಿ, 2010ರಲ್ಲಿ ಎರಡು ಬಾರಿ ಹಾಗೂ 2012ರಲ್ಲಿ ಒಂದು ಬಾರಿ ಪಾಕಿಸ್ತಾನದಿಂದ ದುಬೈಗೆ ಪ್ರಯಾಣಿಸಿದ್ದಾರೆ ಎಂದು ವರದಿ ಮಾಡಿವೆ.
ಒಟ್ಟಿನಲ್ಲಿ ಪಾಕಿಸ್ತಾನದಲ್ಲಿ ಎಲ್ಲಾ ಪ್ರಮುಖ ಉಗ್ರರು ರಕ್ಷಣೆ ಪಡೆಯುತ್ತಿದ್ದಾರೆ. ಉಗ್ರರಿಗೆ ಪಾಕಿಸ್ತಾನ ರಕ್ಷಣೆ ನೀಡುವ ಸ್ವರ್ಗವಾಗಿದೆ ಎಂದು ವರದಿಗಳು ಹೇಳುತ್ತಿವೆ.