ಇಸೀಸ್ ಉಗ್ರ ಸಂಘಟನೆ ಮುಖಂಡ ಅಲ್ ಬಾಗ್ದಾದಿ
ಲಂಡನ್: ಇರಾಕ್ ನಗರದ ಮೊಸೂಲ್ ನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಇಸೀಸ್ ಉಗ್ರ ಸಂಘಟನೆಯ ಮುಖಂಡ ಮೊಸೂಲ್ ನಿಂದ ಪರಾರಿಯಾಗಿದ್ದಾನೆ ಎಂದು ಬ್ರಿಟನ್ ನ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಹೌಸ್ ಆಫ್ ಕಾಮನ್ಸ್ ಗೆ ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ, ಇರಾಕ್ ನ ಸೇನೆಯನ್ನು ಎದುರಿಸಲು ಹಿಂಜರಿಯಬೇಡಿ ಎಂದು ತನ್ನ ಪಡೆಗೆ ಸೂಚಿಸಿದ್ದ ಉಗ್ರ ಸಂಘಟನೆ ಮುಖಂಡ ಅಲ್ ಬಾಗ್ದಾದಿ ಸ್ವತಃ ತಾನೇ ಮಸೂಲ್ ನಿಂದ ಪರಾರಿಯಾಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಇರಾಕ್ ಸೇನೆ ಮಸೂಲ್ ನ್ನು ಸುತ್ತುವರೆದಿರುವ ಹಿನ್ನೆಲೆಯಲ್ಲಿ ತನ್ನ ಉಗ್ರಸಂಘಟನೆಗೆ ಸಂದೇಶ ಕಳಿಸಿರುವ ಅಲ್ ಬಾಗ್ದಾದಿ, ಉಗ್ರ ಸಂಘಟನೆಗೆ ಜಯ ಸಿಗಲಿದ್ದು ಇರಾಕ್ ಸೇನಾ ಪಡೆ ವಿರುದ್ಧ ಹೋರಾಟ ಮುಂದುವರೆಸಬೇಕಾಗಿ ಸೂಚನೆ ನೀಡಿರುವುದು ಆಡಿಯೋ ದಾಖಲೆಗಳ ಮೂಲಕ ಬಹಿರಂಗವಾಗಿದೆ. ದೇವರ ವಿರೋಧೀಗಳ ಮೇಲೆ ದಾಳಿ ನಡೆಸಲು ಇಸೀಸ್ ಉಗ್ರರಿಗೆ ಅಲ್ ಬಾಗ್ದಾದಿ ಮೊರೆಯಿಟ್ಟುದ್ದು, ಇರಾಕ್ ಸೈನ್ಯದ ವಿರುದ್ಧ ಜಿಹಾದಿಗಳು ಯುದ್ಧ ಘೋಷಿಸಲಿದ್ದಾರೆ ಎಂಬ ಮಾಹಿತಿಯನ್ನು ಬ್ರಿಟನ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.