ವಿದೇಶ

ಭಾರತದ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ದುಬಾರಿ ಮೊತ್ತದ ನೋಟುಗಳ ರದ್ದತಿಗೆ ಸಂಸದರ ಕರೆ!

Srinivas Rao BV
ಇಸ್ಲಾಮಾಬಾದ್: ಭಾರತದಲ್ಲಿ 500, 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಭಾರತವನ್ನು ಅನುಕರಣೆ ಮಾಡಲು ಪಾಕಿಸ್ತಾನ ಮುಂದಾಗಿದೆ. ಪಾಕಿಸ್ತಾನದ ವಿರೋಧಪಕ್ಷದ ನಾಯಕರು ಭಾರತದ ಮಾದರಿಯಲ್ಲೇ ಪಾಕಿಸ್ತಾನದಲ್ಲೂ  5000, 1000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸಂಸತ್ ನಲ್ಲಿ ನಿರ್ಣಯವನ್ನೂ ಮಂಡಿಸಿದ್ದಾರೆ. 
ಪಾಕಿಸ್ತಾನ ಪೀಪಲ್ಸ್ ಪಾರ್ಟೀ(ಪಿಪಿಪಿ) ಸಂಸದ ಸೈಫುಲ್ಲಾ ಖಾನ್ ದುಬಾರಿ ಮೊತ್ತದ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಪಾಕಿಸ್ತಾನ ಸರ್ಕಾರ ಅತ್ಯಂತ ಕಳೆಪೆಯಾಗಿ ಯೋಜಿಸಿರುವ ತೆರಿಗೆ ನೀತಿಗಳಿಂದ ಪಾಕಿಸ್ತಾನದ ಜನತೆ ನಗದು ಆರ್ಥಿಕತೆಯತ್ತ ಸಾಗುತ್ತಿದ್ದಾರೆ. ಇದರಿಂದ ಅಕ್ರಮ ಹಣ ವಹಿವಾಟು ಹೆಚ್ಚುತ್ತಿದ್ದು ಭ್ರಷ್ಟಾಚಾರವೂ ಹೆಚ್ಚುತ್ತಿದೆ, ಭ್ರಷ್ಟಾಚಾರ, ಅಕ್ರಮ ಹಣ ವಹಿವಾಟುಗಳನ್ನು ತಡೆಗಟ್ಟಲು ಪಾಕಿಸ್ತಾನದಲ್ಲೂ ಭಾರತದಂತೆಯೇ 1000, 5000 ರೂಗಳ ನೋಟುಗಳನ್ನು ರದ್ದುಗೊಳಿಸಬೇಕೆಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದ್ದಾರೆ. 
ದುಬಾರಿ ಮೊತ್ತದ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದೊಂದೇ ಕಪ್ಪುಹಣವನ್ನು ತಡೆಗಟ್ಟಲು ಇರುವ ಮಾರ್ಗ ಎಂದು ಪ್ರತಿಪಕ್ಷದ ಸಂಸದ ಸೈಫುಲ್ಲಾ ಖಾನ್ ಹಣಕಾಸು ವ್ಯವಹಾರಗಳ ಸ್ಥಾಯಿಸಮಿತಿ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಅಭಿಪ್ರಾಯ ಪಡೆದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಥಾಯಿಸಮಿತಿ ಅಧ್ಯಕ್ಷರಿಂದ ಭರವಸೆ ದೊರೆತಿದೆ. 
SCROLL FOR NEXT