ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಕಿವೀಸ್ ಕರಾವಳಿ ತೀರದಲ್ಲಿ ಪ್ರಬಲ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗುತ್ತಿದೆ.
ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕ್ರೈಸ್ಟ್ ಚರ್ಚ್ ನಿಂದ 90 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ. ಪ್ರಬಲ ಭೂಕಂಪನದ ಪರಿಣಾಮ ಕ್ರೈಸ್ಟ್ ಚರ್ಚ್ ನ ಬಹುಮಹಡಿ ಕಟ್ಟಡಗಳು ಜಖಂಗೊಂಡಿದ್ದು, ಸ್ಥಳೀಯ ಕಾಲಮಾನ ಮಧ್ಯರಾತ್ರಿ 12.2ರ ಸಂದರ್ಭದಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ.
ಭೂಕಂಪನದ ಬೆನ್ನಲ್ಲೇ ಕರಾವಳಿ ತೀರದಲ್ಲಿ ಸುನಾಮಿ ಎಚ್ಚರಿಕಾ ಕೇಂದ್ರದಿಂದ ಸುನಾಮಿ ಅಲೆಗಳು ಏಳುವ ಕುರಿತು ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ತೀರದ ಜನರನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ನ್ಯೂಜಿಲೆಂಡ್ ರೇಡಿಯೋ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಕ್ರೈಸ್ಟ್ ಚರ್ಚ್ ಕರಾವಳಿಗೆ ಅಪ್ಪಳಿಸಿದ ಸುನಾಮಿ!
ಮೂಲಗಳ ಪ್ರಕಾರ ಈಗಾಗಲೇ ಕ್ರೈಸ್ಟ್ ಚರ್ಚ್ ನಗರದ ಕರಾವಳಿ ತೀರಕ್ಕೆ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯೂಜಿಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಸುನಾಮಿಯ ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 2011 ಫೆಬ್ರವರಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ನ್ಯೂಜಿಲೆಂಡ್ ನಲ್ಲಿ 185 ಮಂದಿ ಸಾವನ್ನಪ್ಪಿದ್ದರು.