ಕ್ಸಿ ಜಿಂಪಿಂಗ್-ಡೊನಾಲ್ಡ್ ಟ್ರಂಪ್
ಬೀಜಿಂಗ್: ಅಮೆರಿಕಾದ ನೂತನವಾಗಿ ಆಯ್ಕೆಯಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಡೆಸಿದ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಚೈನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ಎರಡು ದೇಶಗಳ ನಡುವೆ ಸಹಕಾರ ಮಾತ್ರ ಸರಿಯಾದ ಆಯ್ಕೆ ಎಂದಿದ್ದಾರೆ.
ನವೆಂಬರ್ ೮ ರ ಚುನಾವಣೆಯಲ್ಲಿ ಗೆದ್ದ ಟ್ರಂಪ್ ಅವರಿಗೆ ಕ್ಸಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಇ ಎಫ್ ಐ ನ್ಯೂಸ್ ವರದಿ ಮಾಡಿದೆ.
ಎರಡು ದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿ, ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಮತ್ತು ವಿನಿಯೋಗ, ಸೈನೋ-ಅಮೆರಿಕಾ ಸಂಬಂಧದಿಂದ ಎರಡು ದೇಶದ ನಾಗರಿಕರಿಗೆ ಆಗುವ ಉಪಯೋಗಗಳತ್ತ ಗಮನ ಹರಿಸಬೇಕು ಎಂದು ಕ್ಸಿ ಹೇಳಿದ್ದಾರೆ ಎನ್ನಲಾಗಿದೆ.
ಚೈನಾ ಜೊತೆಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿಕೊಳ್ಳುವ ಒಲವು ತೋರಿದ ಟ್ರಂಪ್, ವಿಶ್ವದ ಎರಡು ದೊಡ್ಡ ಆರ್ಥಿಕ ದೇಶಗಳ ನಡುವೆ ಸಂಬಂಧ ವೃದ್ಧಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಚುನಾವಣಾ ಪ್ರಚಾರದ ವೇಳೆಯಲ್ಲಿ ಟ್ರಂಪ್, ಚೈನಾ ದೇಶವನ್ನು ಟೀಕಿಸಿದ್ದ ಹಿನ್ನಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. ಚೈನಾ ಅಮೆರಿಕಾದ ಉದ್ಯೋಗಗಳನ್ನು ಕಸಿಯುತ್ತಿದೆ ಎಂದು ದೂರಿದ್ದ ಟ್ರಂಪ್, ಚೈನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕುವುದಾಗಿ ಹಾಗು ಚೈನಾ ನೋಟು ಮೌಲ್ಯದ ಮಾರ್ಪಾಟುದಾರ ದೇಶ ಎಂದು ಘೋಷಿಸಿ, ವಾಷಿಂಗ್ಟನ್ ಹಲವು ನಿಷೇಧಗಳನ್ನು ಹೇರಲಿದೆ ಎಂದು ಘೋಷಿಸಿದ್ದರು.