ನೋಟುಗಳ ರದ್ದತಿ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ: ಚೀನಾ ಮಾಧ್ಯಮ
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೂ.500,1000 ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿರುವ ನಿರ್ಧಾರವನ್ನು ದಿಟ್ಟ ಹಾಗೂ ದೃಢ ಎಂದು ಬಣ್ಣಿಸಿರುವ ಚೀನಾ ಮಾಧ್ಯಮ, ಕೇಂದ್ರ ಸರ್ಕಾರದ ನಿರ್ಧಾರದಿಂದ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಂಪಾದಕೀಯ ಪುಟದಲ್ಲಿ ಪ್ರಕಟಿಸಿದ ಲೇಖನದಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್, ಗರಿಷ್ಠ ಮುಖಬೆಲೆಯ ಎರಡು ನೋಟುಗಳನ್ನು ರದ್ದುಗೊಳಿಸಲು ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದು, ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮಂದಿಗೆ ಅನಾನುಕೂಲ ಉಂಟಾಗಿದೆ ಎಂದಿದೆ.
ಕೇಂದ್ರ ಸರ್ಕಾರದ ಕ್ರಮ ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಸಾಧ್ಯವೇ ಎಂಬುದನ್ನು ವಿಶ್ಲೇಷಿಸಿರುವ ಗ್ಲೋಬಲ್ ಟೈಮ್ಸ್, ಮೋದಿ ನೇತೃತ್ವದ ಸರ್ಕಾರದ್ದು ದಿಟ್ಟ ನಿರ್ಧಾರವೇ ಆಗಿದ್ದರೂ, ಅದರಿಂದ ಭಾರತವನ್ನು ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಭಾರತವನ್ನು ಭ್ರಷ್ಟಾಚಾರದಿಂದ ಹೊರತರಲು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದಕ್ಕಿಂತ ಹೆಚ್ಚಿನ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಮೋದಿ ಎಂದರೆ ಒಳ್ಳೇಯ ನಿರ್ಧಾರವಾಗಿದ್ದು ಭಾರತದ ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಕಪ್ಪು ಆರ್ಥಿಕತೆಯಡಿಯಲ್ಲಿದ್ದ ಅಕ್ರಮ ಉದ್ಯಮಗಳಲ್ಲಿ ಕೇವಲ 500-1000 ರೂ ನೋಟುಗಳೇ ಚಲಾವಣೆಯಲ್ಲಿತ್ತು. ದೇಶದಲ್ಲಿ ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.80 ರಷ್ಟನ್ನು 500, 1000 ರೂ ನೋಟುಗಳೇ ಆವರಿಸಿದ್ದವು. ಆದರೆ ಇವುಗಳನ್ನು ನಿಷೇಧಿಸಿದ ಮಾತ್ರಕ್ಕೆ ಭಾರತ ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ, ಭಾರತವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಎಂದು ಚೀನಾ ಮಾಧ್ಯಮ ಹೇಳಿದೆ.