ವಿದೇಶ

ನನ್ನ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಉತ್ತಮ ಬಾಂಧವ್ಯ ಇದೆ: ಪ್ರಧಾನಿ ಮೋದಿ

Srinivas Rao BV
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  
ಡೊನಾಲ್ಡ್ ಟ್ರಂಪ್ ಅವರ ಆಯ್ಕೆ ಬಗ್ಗೆ ಅನೌಪಚಾರಿಕವಾಗಿ ಲೋಕಸಭೆಯ ಸ್ಪೀಕರ್ ಹಾಗೂ ಸದಸ್ಯರೊಂದಿಗೆ ಅಭಿಪ್ರಾಯ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಟ್ರಂಪ್ ಆಡಳಿತ ಭಾರತದತ್ತ ಹೆಚ್ಚು ಒಲವು ತೋರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಔತಣ ಕೂಟದಲ್ಲಿ ಸುಮಾರು 75 ನಿಮಿಷಗಳ ಕಾಲ ಚರ್ಚೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಾಗೂ ಟ್ರಂಪ್ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಾ, ಟ್ರಂಪ್ ಹಾಗೂ ತಮ್ಮ ಬಾಂಧವ್ಯ ಉತ್ತಮವಾಗಿದೆ ಎಂದು ಹೇಳಿದ್ದು, ಅಮೆರಿಕ-ಭಾರತದ ದ್ವಿಪಕ್ಷೀಯ ಸಂಬಂಧದಲ್ಲಿ ಏಕಾಏಕಿ ಬದಲಾವಣೆಗಳನ್ನು ನಿರೀಕ್ಷಿಸಲು ಯಾವುದೇ ಕಾರಣಗಳಿಲ್ಲ ಎಂದು ಮೋದಿ ಹೇಳಿದ್ದಾರೆ. 
ಅಮೆರಿಕದ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಪಕ್ಷ ಹಾಗೂ ಅದರ ಅಧ್ಯಕ್ಷರುಗಳು ಭಾರತ ಹಾಗೂ ಇಲ್ಲಿನ ಪ್ರಧಾನಿಗಳೊಂದಿಗೆ ಈ ಹಿಂದೆ ಹೊಂದಿದ್ದ ದ್ವಿಪಕ್ಷೀಯ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಿಪಬ್ಲಿಕನ್ ಪಕ್ಷದ ನೇತಾರರು ಭಾರತದೊಂದಿಗೆ ಸೌಹಾರ್ದಯುತ ಸ್ನೇಹವನ್ನೇ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ- ಅಮೆರಿಕದ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರ ನಡುವಿನ ಸ್ನೇಹ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧವನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿತ್ತು. 
SCROLL FOR NEXT