ಅಫ್ಘಾನಿಸ್ಥಾನ್: ಕಾಬುಲ್ ನಲ್ಲಿ ಬುಧವಾರ ಸರ್ಕಾರಿ ವಾಹನವೊಂದಕ್ಕೆ ಹೊಕ್ಕಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ ಆರು ಜನ ಮೃತಪಟ್ಟು ೧೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಈ ದಾಳಿಯ ಹೊಣೆ ಹೊತ್ತಿದೆ.
ಉಗ್ರಗಾಮಿಗಳು ದೇಶದಾದ್ಯಂತ ದಾಳಿಗಳನ್ನು ತೀವ್ರಗೊಳಿಸಿದ್ದು, ಈ ದಾಳಿ ಮುಂಜಾನೆಯಲ್ಲಿ ನಡೆದಿದೆ. "ಕಾಬುಲ್ ನಲ್ಲಿ ಭದ್ರತಾ ಪಡೆಗಳಿಗೆ ಸೇರಿದ ವಾಹನವನ್ನು ಭಯೋತ್ಪಾದಕ ದಾಳಿಯಾಗಿಸಿದ್ದ" ಎಂದು ಆಂತರಿಕ ಸಚಿವಾಲಯದ ವಕ್ತಾರ ಸೇದಿಕ್ ಸೆದ್ದಿಖಿ ಹೇಳಿದ್ದಾರೆ.
ಭದ್ರತಾ ಸಚಿವಾಲಯದ ಬಳಿ ನಡೆದ ಈ ದಾಳಿಯಲ್ಲಿ ಐದು ನಾಗರಿಕರು ಮತ್ತು ಸೇನಾಧಿಕಾರಿ ಸೇರಿದಂತೆ ಆರು ಜನ ಮೃತಪಟ್ಟಿದ್ದು, ೧೦ ಜನ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಕಳೆದ ಶನಿವಾರವಷ್ಟೇ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ನಾಲ್ವರು ಅಮೆರಿಕನ್ನರು ಮೃತಪಟ್ಟಿದ್ದರು. ಇದು ಅಮೆರಿಕಾ ಸೇನಾ ನೆಲೆಯ ಬಳಿ ನಡೆದ ಘಟನೆಯಾಗಿತ್ತು. ಇದಕ್ಕೆ ತಾಲಿಬಾನ್ ಹೊಣೆ ಹೊತ್ತಿತು.