ರಾವಲ್ಪಿಂಡಿ: ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳ ತಜ್ಞ ಜನರಲ್ ಖಮರ್ ಜಾವೆದ್ ಬಾಜ್ವ ಪಾಕಿಸ್ತಾನ ಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ ಎಂಬುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಸೇನಾಪಡೆಗಳು ಸ್ಥೈರ್ಯ ಕಾಪಾಡಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿ ಬೆಂಬಲ ನೀಡಬೇಕೆಂದು ಬಾಜ್ವಾ ಕೋರಿದ್ದಾರೆ. ತಮ್ಮ ಮೇಲೆ ಮಹತ್ತರ ಜವಾಬ್ದಾರಿಯಿದೆ ಎಂದು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ಮತ್ತು ಭಾರೀ ಗುಂಡಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲಿ ಬಾಜ್ವಾ ಅವರ ನೇಮಕ ಮಹತ್ವ ಗಳಿಸಿದೆ. ಇದು ಭಾರತದ ಪರ ಸಮನ್ವಯಕಾರಿ ಸೂಚಕವಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.