ವಾಷಿಂಗ್ಟನ್: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಜಿತ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಬಂದಿದ್ದ ಅರ್ಜಿ ಅಮೆರಿಕದ ವೈಟ್ ಹೌಸ್ ಇತಿಹಾಸದಲ್ಲಿಯೇ ಅತೀಹೆಚ್ಚು ಜನಪ್ರಿಯತೆ ಪಡೆದ ಅರ್ಜಿ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಈ ಮೂಲಕ ನಾವು ನಮ್ಮ ಸರ್ಕಾರವನ್ನು ಕೋರುತ್ತಿದ್ದೇವೆ ಎಂದು ಸಲ್ಲಿಕೆಯಾದ ಅರ್ಜಿ ಸಂಖ್ಯೆ HR 6069 ಅರ್ಜಿ ಅಮೆರಿಕದ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನಪ್ರಿಯತೆ ಪಡೆದ ಅರ್ಜಿ ಎಂಬ ಖ್ಯಾತಿಗಳಿಸಿದೆ. ಮನವಿಗೆ ವಿಶ್ವಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, 6 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದೆ. ಶ್ವೇತ ಭವನ ಮನವಿ ಸಂಖ್ಯೆಯನ್ನು ಲೆಕ್ಕ ಹಾಕುವ ಅಂತಿಮ ಕ್ಷಣದಲ್ಲೂ ಕೂಡ ಮನವಿಗೆ ಸುಮಾರು 50 ಸಾವಿರಕ್ಕೂ ಅಧಿಕ ಸಹಿ ಸಂಗ್ರಹವಾಗಿರುವುದು ಮನವಿಯ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈ ಆನ್‌ಲೈನ್ ಮನವಿಗೆ ಬಿದ್ದಿರುವ ಒಟ್ಟು ಸಹಿಗಳ ಸಂಖ್ಯೆ 6,13,830ಕ್ಕೇರಿದ್ದು, ಶ್ವೇತಭವನದ ನಿಯಮಾವಳಿಗಳ ಪ್ರಕಾರ ಯಾವುದೇ ಮನವಿಗೆ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾದರೆ ಅಂತಹ ಅರ್ಜಿ ವಿಲೇವಾರಿಗೆ ಅಥವಾ ಸರ್ಕಾರದ ಅಧಿಕೃತ ಸ್ಪಂಧನೆಗೆ ಅರ್ಹವಾಗಿರುತ್ತದೆ. ಆದರೆ ಈ ಅರ್ಜಿಗೆ ಬರೊಬ್ಬರಿ 6 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿದ್ದರೂ ಕೂಡ ಈ ಅರ್ಜಿ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಹೇಳಿ ಅಮೆರಿಕ ಇದನ್ನು ತನ್ನ ಸಂಗ್ರಹಪಟ್ಟಿಗೆ ಸೇರಿಸಿರುವುದು ಮನವಿದಾರರ ನಿರಾಶೆಗೆ ಕಾರಣವಾಗಿದೆ.