ವಿದೇಶ

ಮತ್ತೆ ಪಾಕ್ ತಲಹರಟೆ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ: ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರ

Shilpa D

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ ಎಂದು ಪಾಕಿಸ್ತಾನ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಪಾಕ್ ಸಂಸತ್ತಿನ ಜಂಟಿ ಅಧಿವೇಶನದ ಮೂರನೇ ದಿನವಾದ ಇಂದು ವಿದೇಶಾಂಗ ಸಚಿವಾಲಯ ಸಲಹೆಗಾರ ಸರ್ತಾಜ್ ಅಝೀಜ್ ನೀಡಿರುವ ಸಲಹೆ ಮೇರೆಗೆ ಜಮ್ಮು ಕಾಶ್ಮೀರ ಭಾರತದ ಭಾಗವಲ್ಲ ಎಂಬ ನಿರ್ಣಯಕ್ಕೆ ಅಂಗೀಕಾರ ದೊರೆತಿದೆ.

ಸೆಪ್ಟಂಬರ್ 18 ರಂದು ಉರಿ ಸೇನಾ ನೆಲೆ ಮೇಲೆ ಪಾಕ್ ದಾಳಿ ನಡೆಸಿದೆ ಎಂಬ ಭಾರತದ ಆರೋಪವನ್ನು ಪಾಕ್ ಸಂಸತ್ತಿನಲ್ಲಿ ಖಂಡಿಸಲಾಗಿದೆ. ಬಲೊಚಿಸ್ತಾನದಲ್ಲಿ  ಭಯೋತ್ಪಾದನೆ ಹರಡಲು ಭಾರತದ ಗೂಢಾಚಾರ ಕುಲಭೂಷಣ್ ಜಾದವ್ ಕಾರಣ ಎಂದು ಪಾಕ್ ಸಂಸತ್ತಿನಲ್ಲಿ  ಆರೋಪಿಸಲಾಗಿದೆ.

ಉರಿ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಸಾಕಷ್ಟು ಹದಗೆಟ್ಟಿದ್ದು, ಇದಕ್ಕೆ ಸಂಬಂಧಿಸಿ ವಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸದಸ್ಯರು ಸಂಸತ್ತಿನಲ್ಲಿಯೇ ಆಡಳಿತಾರೂಢ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ವಿಶ್ವಮಟ್ಟದಲ್ಲಿ ದಾಳಿ ನಾಡೆಸುತ್ತಿದ್ದರೂ ಯಾವುದೇ ಪ್ರತ್ಯುತ್ತರವಿಲ್ಲದೇ ಸುಮ್ಮನಿದ್ದಿದ್ದೇಕೆ ಎಂದು ಪ್ರಶ್ನಿಸಿರುವ ಪಿಪಿಪಿ ಮುಖ್ಯಸ್ಥ ಶೆರ್ರಿ ರೆಹಮಾನ್, ಕಾಶ್ಮೀರ ವಿವಾದವನ್ನು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ ಎಂದು ನಿರ್ಣಯ ಅಂಗೀಕರಿಸಿದ ನಂತರ ಪಾಕ್ ಸಂಸತ್ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

SCROLL FOR NEXT