ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್
ವಾಷಿಂಗ್ಟನ್: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಸರ್ಕಾರದ ರಕ್ಷಣೆಗಾಗಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸುತ್ತಿರುವುದಾಗಿ ಕನಿಷ್ಠ 70 ನೊಬೆಲ್ ಪ್ರಶಸ್ತಿ ವಿಜೇತರು ಘೋಷಿಸಿದ್ದಾರೆ.
ವಿಜ್ಞಾನ, ವೈದ್ಯಕೀಯ ಮತ್ತು ಅರ್ಥಶಾಸ್ತ್ರ ವಿಭಾಗಳಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಇವರು ಪತ್ರ ಬರೆಯುವ ಮೂಲಕ ಮಂಗಳವಾರ ಕ್ಲಿಂಟನ್ ಅವರನ್ನು ಬೆಂಬಲಿಸಿದ್ದಾರೆ. ಹಲವಾರು ರಂಗಗಳಲ್ಲಿ ವಿಶ್ವ ಸವಾಲುಗಳನ್ನು ಎದುರಿಸುತ್ತಿದ್ದು ವಿಜ್ಞಾನದಲ್ಲಿ ಹೂಡಿಕೆಯನ್ನು ಕ್ಲಿಂಟನ್ ಸಮರ್ಥವಾಗಿ ಅರ್ಥ ಮಾಡಿಕೊಳ್ಳಬಲ್ಲರು ಎಂದು ಪತ್ರ ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೆಸರನ್ನು ಪಾತ್ರದಲ್ಲಿ ಎಲ್ಲೂ ಎತ್ತದೆ ಇದ್ದರು, ಅವರ ನೀತಿಗಳು ವೈಜ್ಞಾನಿಕ ಜ್ಞಾನವನ್ನು ಎಲ್ಲಿಯೂ ಎತ್ತಿಹಿಡಿಯುವುದಿಲ್ಲ ಮತ್ತು ಇದು ಅಮೆರಿಕಾದ ಗೌರವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ ಎಂದಿದ್ದಾರೆ.
"ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇನ್ನು ಉನ್ನತವಾಗುವ ನೀತಿಗಳನ್ನು ಸೃಷ್ಟಿಸಿ ಬೆಂಬಲಿಸುವ ಅಧ್ಯಕ್ಷರ ಅವಶ್ಯಕತೆ ಇದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
ಸಹಿ ಹಾಕಿರುವ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ರಾಸಾಯನಶಾಸ್ತ್ರಜ್ಞ ಪೀಟರ್ ಆಗ್ರೆ, ಅರ್ಥಶಾಸ್ತ್ರಜ್ಞ ರಾಬರ್ಟ್ ಜೆ ಶಿಲ್ಲರ್, ಭೌತ ಶಾಸ್ತ್ರಜ್ಞ ರಾಬರ್ಟ್ ವುಡ್ರೋ ವಿಲ್ಸನ್ ಕೂಡ ಸೇರಿದ್ದಾರೆ.