ವಿದೇಶ

ಇಸಿಸ್ ನಿಂದ ಮೊಸುಲ್ ಮರಳಿ ಪಡೆಯಲು ಅಮೆರಿಕಕ್ಕೆ ಟರ್ಕಿ ಸಾಥ್!

Srinivasamurthy VN

ಅಂಕರ: ಇಸ್ಲಾಮಿಕ್ ಸ್ಟೇಟ್ ಉಗ್ರರ ಕಪಿ ಮುಷ್ಟಿಯಲ್ಲಿರುವ ಮೊಸುಲ್ ನಗರವನ್ನು ಮರಳಿ ಪಡೆಯಲು ಅಮೆರಿಕ ನೇತೃತ್ವದ ಮಿತ್ರಪಡೆಗಳು ದಾಳಿ ನಡೆಸುತ್ತಿರುವಂತೆಯೇ ಟರ್ಕಿ ಕೂಡ ಇದಕ್ಕೆ  ಸಾಥ್ ನೀಡಲು ಮುಂದಾಗಿದೆ.

ಮೊಸುಲ್ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಹುಟ್ಟಡಗಿಸಲು ಅಂತಾರಾಷ್ಟ್ರೀಯ ಪಡೆಗಳಿಗೆ ಸಾಥ್ ನೀಡುವುದಾಗಿ ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡಿರಿಮ್ ಹೇಳಿದ್ದಾರೆ. ಈ ಬಗ್ಗೆ ಮಂಗಳವಾರ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿನಾಲಿ ಯಿಲ್ಡಿರಿಮ್ ಅವರು, ಮೊಸುಲ್ ನಗರದಲ್ಲಿ ಅಮೆರಿಕ ಮಿತ್ರ ಪಡೆಗಳು ನಡೆಸುತ್ತಿರುವ ವಾಯುದಾಳಿಯಲ್ಲಿ ಟರ್ಕಿ ಸೇನೆ ಕೂಡ ಪಾಲ್ಗೊಳ್ಳಲಿದೆ  ಎಂದು ಘೋಷಿಸಿದ್ದಾರೆ.

ಮನುಷ್ಯತ್ವಕ್ಕೆ ವಿರುದ್ಧವಾದ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಬೇಕಿದ್ದು, ಇದಕ್ಕಾಗಿ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ. ಪ್ರಧಾನಿ ಬಿನಾಲಿ  ಯಿಲ್ಡಿರಿಮ್ ಅವರ ನಿರ್ಧಾರವನ್ನು ಬೆಂಬಲಿಸಿರುವ ಟರ್ಕಿ ಅಧ್ಯಕ್ಷ ಟಯ್ಯೀಪ್ ಯೆರ್ಡೋಗನ್ ಅವರು, ಇರಾಕ್ ನೊಂದಿಗೆ ಟರ್ಕಿ ಕೂಡ ಸುಮಾರು 350 ಕಿ.ಮೀ ವ್ಯಾಪ್ತಿಯಲ್ಲಿ ಗಡಿ ಪ್ರದೇಶವನ್ನು  ಹೊಂದಿದೆ. ಗಡಿ ಪ್ರದೇಶದ ಭದ್ರತೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ. ಟರ್ಕಿ ಸೇನೆ ಮೂಲಕ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT