ಅಲ್ಜೀರ್ಸ್: ಜಮ್ಮು ಮತ್ತು ಕಾಶ್ಮೀರದ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರ ಕುರಿತ ವಿಚಾರದಲ್ಲಿ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅಲ್ಜೀರಿಯಾ ಪ್ರಧಾನಮಂತ್ರಿ ಅಬ್ದೆಲ್ ಮಲೇಕ್ ಸೆಲ್ಲಾಲ್ ಅವರು ಹೇಳಿದ್ದಾರೆ.
ಎರಡು ದಿನಗಳ ಕಾಲ ಉತ್ತರ ಆಫ್ರಿಕಾ ರಾಷ್ಟ್ರಕ್ಕೆ ಭೇಟಿ ನೀಡಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಅಲ್ಜೀರಿಯಾ ಪ್ರಧಾನಮಂತ್ರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ.
ಮಾತುಕತೆ ವೇಳೆ ಅಲ್ಜೀರಿಯಾ ಪ್ರಧಾನಮಂತ್ರಿಗಳು ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆ ವಿರುದ್ಧದ ಭಾರತದ ನಿಲುವಿಗೂ ನಮ್ಮ ಬೆಂಬಲವಿದೆ. ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತುಹಾಕಬೇಕಿದೆ ಎಂದು ಹೇಳಿದ್ದಾರೆ.
ಮಾತುಕತೆ ವೇಳೆ ಪಾಕಿಸ್ತಾನದ ಹೆಸರನ್ನೇ ಬಳಸದೆ ಅಲ್ಜೀರಿಯಾ ಪ್ರಧಾನಮಂತ್ರಿಗಳು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆಂದು ತಿಳಿದುಬಂದಿದೆ.
ಅಲ್ಜೀರಿಯಾ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉಪ ರಾಷ್ಟ್ರಪತಿಗಳು, ತೃತೀಯ ರಾಷ್ಟ್ರ ಯಾವುದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದೇಶದ ಹೆಸರನ್ನು ಹೇಳುವ ಅಗತ್ಯವಿಲ್ಲ. ಭಯೋತ್ಪಾದನೆ ಕುರಿತಂತೆ ಅಲ್ಜೀರಿಯಾ ನಾಯಕರೊಂದಿಗೆ ಮಾತುಕತೆ ನಡೆಸಲಾಯಿತು. ಭಯೋತ್ಪಾದನೆಯೆಂಬುದು ಇದೀಗ ವಿಶ್ವದ ಪ್ರತೀಯೊಂದು ರಾಷ್ಟ್ರಕ್ಕೂ ತಲೆನೋವಾಗಿ ಪರಿಣಮಿಸಿದೆ. ಇಂತಹ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಬೇಕೆಂಬುದು ನಾಯಕರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಅಲ್ಜೀರಿಯಾ ಕೂಡ ಈ ಹಿಂದೆ ಸಾಕಷ್ಟು ಭಯೋತ್ಪಾದನಾ ಸಮಸ್ಯೆಯನ್ನು ಎದುರಿಸಿದೆ. ವರ್ಷಗಳ ಕಾಲ ಪಟ್ಟ ಶ್ರಮಗಳ ಬಳಿಕ ಈಗಷ್ಟೇ ಕೊಂಚ ನಿರಾಳವನ್ನು ಕಂಡಿದೆ. ಭಯೋತ್ಪಾದನಾ ದಾಳಿಯಿಂದ ಸಾವಿರಾರು ಜೀವಗಳು ಇಲ್ಲಿ ಬಲಿಯಾಗಿವೆ. ಭಯೋತ್ಪಾದನೆಗೆ ಬಲಿಯಾಗದ ಒಂದು ಕುಟುಂಬ ಕೂಡ ಅಲ್ಜೀರಿಯಾದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.