ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ತಾನು ಏಕಾಂಗಿಯಾಗಿಯೇ ಹೋರಾಡಲು ಸಿದ್ಧ ಎಂದು ಪಾಕಿಸ್ತಾನಕ್ಕೆ ಅಮೆರಿಕ ಕಠಿಣ ಎಚ್ಚರಿಕೆ ನೀಡಿದೆ.
ತನ್ನ ದೇಶದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಹಾಗೂ ಉಗ್ರರ ಮೇಲೆ ಪಾಕಿಸ್ತಾನ ಕಠಿಣಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡಲೂ ಕೂಡ ತಾನು ಹಿಂಜರಿಯುವುದಿಲ್ಲ ಎಂದು ಅಮೆರಿಕ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಆ್ಯಡಮ್ ಸ್ಜುಬಿನ್ ಅವರು, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಹಾಗೂ ಆ ದೇಶದ ಗುಪ್ತಚರ ಇಲಾಖೆ ಐಎಸ್ ಐ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳಿಂದಾಗಿ ಉಗ್ರರ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಇಂತಹ ಕಾರಣಗಳಿಂದಾಗಿ ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಭಯೋತ್ಪಾದನೆ ವಿರುದ್ಧ ಅಮೆರಿಕ ಏಕಾಂಗಿಯಾಗಿಯೇ ಹೋರಾಡಲು ಸಿದ್ಧ ಎಂದೂ ಅವರು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾವು ಪಾಕಿಸ್ತಾನಕ್ಕೆ ಆಗ್ರಹಿಸುವುದಿಲ್ಲ. ಅನಿವಾರ್ಯ ಅಥವಾ ಅತಂಹ ಪರಿಸ್ಥಿತಿ ನಿರ್ಮಾಣವಾದರೆ ಉಗ್ರ ನೆಲೆಗಳ ಮೇಲೆ ದಾಳಿ ಮಾಡಲೂ ನಾವು ಸಿದ್ಧರಿದ್ದೇವೆ. ಉಗ್ರ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲ ಸದಾಕಾಲವಿರುತ್ತದೆ. ಆದರೆ ಪಾಕಿಸ್ತಾನಕ್ಕೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ಗೊಂದಲಗಳಿರಬಾರದು ಮತ್ತು ಯಾವುದೇ ಕಾರಣಕ್ಕೂ ದ್ವಂದ್ವ ನಿಲುವು ತಳೆಯಬಾರದು ಎಂದು ಆ್ಯಡಮ್ ಸ್ಜುಬಿನ್ ಹೇಳಿದ್ದಾರೆ.