ವಿದೇಶ

ಭಾರತೀಯ ಚಾನೆಲ್ ಗಳ ಮೇಲೆ ನಿಷೇಧ ಹೇರಿದ ಪಾಕಿಸ್ತಾನ

Srinivasamurthy VN

ಇಸ್ಲಾಮಾಬಾದ್: ಬಲೂಚಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸಮುದಾಯದ ಎದುರು ತೀವ್ರ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ಇದೀಗ ತನ್ನ ನೆಲದಲ್ಲಿ ಭಾರತೀಯ ಚಾನೆಲ್ ಗಳು  ಸೇರಿದಂತೆ ಎಲ್ಲ ರೀತಿಯ ವಿದೇಶಿ ಚಾನೆಲ್ ಗಳ ಮೇಲೆ ನಿಷೇಧ ಹೇರಿದೆ.

ಮೂಲಗಳ ಪ್ರಕಾರ ಭಾರತ ಸೇರಿದಂತೆ ವಿದೇಶಿ ನ್ಯೂಸ್ ಚಾನೆಲ್ ಗಳ ಪ್ರಸಾರಕ್ಕೆ ಪಾಕಿಸ್ತಾನದಲ್ಲಿ "ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ"(ಪಿಇಎಂಆರ್ ಎ) ನಿಷೇಧ  ಹೇರಲು ನಿರ್ಧರಿಸಿದ್ದು, ಭಾರತದ ನ್ಯೂಸ್ ಚಾನೆಲ್ ಗಳು ತಕ್ಷಣಕ್ಕೆ ಪ್ರಸಾರ ನಿಲ್ಲಿಸಬೇಕು ಎಂದು ಮಾಧ್ಯಮವೊಂದರಲ್ಲಿ ವರದಿ ಮಾಡಲಾಗಿದೆ. ಭಾರತೀಯ ಡಿಟಿಎಚ್ ಡೀಲರ್ ಗಳು ತಕ್ಷಣವೇ  ಭಾರತೀಯ ಚಾನೆಲ್ ಗಳ ಪ್ರಸಾರವನ್ನು ನಿಲ್ಲಿಸಬೇಕೆಂದು ಪಿಇಎಂಆರ್ ಎ ಸೂಚನೆ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಿಇಎಂಆರ್ ಎ ಅಧ್ಯಕ್ಷ  ಅಬ್ಸಾರ್ ಆಲಂ ಅವರು, ಪಾಕಿಸ್ತಾನದಲ್ಲಿ ಭಾರತದ ಯಾವುದೇ ಚಾನೆಲ್ ಗಳ ಪ್ರಸಾರ ಮಾಡದಂತೆ  ಪಿಇಎಂಆರ್ ಎ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಕಾನೂನು ಕ್ರಮದಂತೆ ಕೇಬಲ್ ಆಪರೇಟರ್ಸ್ ಗಳು ಮತ್ತು ಸೆಟಲೈಟ್ ಚಾನೆಲ್ಸ್ ಗಳು ತಮ್ಮ ಸಮಯವನ್ನು  ಹೊಂದಾಣಿಕೆ ಮಾಡಿಕೊಳ್ಳಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಲೂಚಿಸ್ತಾನ ಪ್ರಜೆಗಳ ಮೇಲೆ ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ನೇರವಾಗಿಯೇ ಧನಿ ಎತ್ತಿದ್ದ ಭಾರತ ಸರ್ಕಾರ ಬಲೂಚ್ ಪ್ರತಿಭಟನಾಕಾರರ ಬೆಂಬಲಕ್ಕೆ ನಿಂತಿತ್ತು.  ಅಲ್ಲದೆ ಇತ್ತೀಚೆಗಷ್ಟೇ ಬಲೂಚ್ ಭಾಷೆಯಲ್ಲಿ ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡುವಂತೆ ಅಲ್ ಇಂಡಿಯಾ ರೇಡಿಯೋಗೆ ನಿರ್ದೇಶನ ನೀಡಿತ್ತು. ಭಾರತದ ಈ ಕ್ರಮವನ್ನು ಖಂಡಿಸಿ  ಪಾಕಿಸ್ತಾನ ಸರ್ಕಾರ ಭಾರತೀಯ ಚಾನೆಲ್ ಗಳನ್ನು ನಿಷೇಧಿಸಿದೆ.

SCROLL FOR NEXT